ADVERTISEMENT

ಪಂಚಾಯಿತಿ ಜನಪ್ರತಿನಿಧಿಗಳ ಸಮಾವೇಶ ಶೀಘ್ರ: ಶೆಟ್ಟರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಗದಗ:  ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ಸಮಾವೇಶವನ್ನು ಶೀಘ್ರದಲ್ಲೇ  ಆಯೋಜಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ ತಿಳಿಸಿದರು.

ಆಡಳಿತ ವಿಕೇಂದ್ರೀಕರಣದ ಪಂಚಾಯಿತಿ ವ್ಯವಸ್ಥೆಯ ಮೂರು ಹಂತಗಳಾಗಿರುವ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ನಡುವೆ ಸೌಹಾರ್ದ ಭಾವನೆ ಮೂಡಿಸುವ ಸಲುವಾಗಿ ಹಾಗೂ ಪರಸ್ಪರ ಅರಿತುಕೊಂಡು ಕೆಲಸವನ್ನು ಮಾಡುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಪಂಚಾಯಿತಿ ವ್ಯವಸ್ಥೆಯ ಜನಪ್ರತಿನಿಧಿಗಳು ಒಬ್ಬರಿಗೊಬ್ಬರು ಸಂಶಯಾಸ್ಪದ ರೀತಿಯಲ್ಲಿ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಗೆ ಹೆಚ್ಚು ಅನುದಾನ ಬರುತ್ತದೆ ಎಂದು ಗ್ರಾಮ ಪಂಚಾಯಿತಿಯವರು, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಡುವೆ ನಮಗೆ ಏನು ಕೆಲಸವಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಪ್ರತಿನಿಧಿಗಳು ಹೇಳುತ್ತಿರುತ್ತಾರೆ. ಆದ್ದರಿಂದ ಎಲ್ಲರಲ್ಲೂ ಸಾಮರಸ್ಯ ಮೂಡಿಸಲು ಬೆಂಗಳೂರಿನಲ್ಲಿ ಪ್ರಾತಿನಿಧಿಕ ಸಮಾವೇಶ ನಡೆಯುತ್ತದೆ ಎಂದರು.

ADVERTISEMENT

ಬರಗಾಲ ಪಟ್ಟಿಗೆ ಸೇರ್ಪಡೆ: ತಾಂತ್ರಿಕ ಕಾರಣಗಳಿಗಾಗಿ ಬರಗಾಲ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರುವ ಅನೇಕ ತಾಲ್ಲೂಕುಗಳನ್ನು ಇನ್ನು ಎರಡು-ಮೂರು ದಿನದಲ್ಲಿ ಸೇರಿಸಲಾಗುತ್ತದೆ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ವಿಷಯವಾಗಿ ಚರ್ಚಿಸಲಾಗಿದೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕೊಡುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಬರ ಪ್ರದೇಶವೆಂದು ಘೋಷಣೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಸಚಿವ ಸಂಪುಟದ ಉಪಸಮಿತಿಯು ಸಭೇಯನ್ನು ಸೇರಿ ಅನುಮೋದನೆ ನೀಡಬೇಕು. ಇನ್ನೆರಡು ದಿನದಲ್ಲಿ ಉಪಸಮಿತಿ ಸಭೆ ನಡೆಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.