ADVERTISEMENT

ಪಾದಯಾತ್ರೆ, ಮ್ಯಾರಥಾನ್‌, ರೋಡ್‌ ಷೋ

ಗದಗ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ಮೇ 2018, 9:27 IST
Last Updated 4 ಮೇ 2018, 9:27 IST
ಗದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು ಗುರುವಾರ ಬೆಟಗೇರಿ ಭಾಗದಲ್ಲಿ ರೋಡ್‌ಶೋ ನಡೆಸಿ, ಮತಯಾಚನೆ ಮಾಡಿದರು
ಗದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು ಗುರುವಾರ ಬೆಟಗೇರಿ ಭಾಗದಲ್ಲಿ ರೋಡ್‌ಶೋ ನಡೆಸಿ, ಮತಯಾಚನೆ ಮಾಡಿದರು   

ಗದಗ: ವಿಧಾನಸಭೆ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿರುವಂತೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಭರಾಟೆ ತೀವ್ರಗೊಂಡಿದೆ. ಗುರುವಾರ ಗದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು ಬೆಟಗೇರಿ ಭಾಗದಲ್ಲಿ ರೋಡ್‌ ಷೋ ನಡೆಸಿ, ಮತಯಾಚನೆ ಮಾಡಿದರು.

ಬೆಟಗೇರಿ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು, ಬಳಿಕ ಅಲ್ಲಿಂದ ಮನೆ, ಮನೆಗೆ ತೆರಳಿ ಪಕ್ಷದ ಕರಪತ್ರಗಳನ್ನು ವಿತರಿಸಿ ಕಾಂಗ್ರೆಸ್‌ ಬೆಂಬಲಿಸುವಂತೆ ಮನವಿ ಮಾಡಿದರು.

‘ವಸತಿರಹಿತರಿಗೆ ಸೂರು ಕಲ್ಪಿಸಬೇಕೆಂದು ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಬೇಕು’ ಎಂದು ಎಚ್.ಕೆ. ಪಾಟೀಲ ಮನವಿ ಮಾಡಿದರು.

ADVERTISEMENT

‘ಕೇಂದ್ರದಿಂದ ಬಡವರಿಗೆ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಿಲ್ಲ. ಗದುಗಿನಲ್ಲಿ ಮೋದಿ ಅವರಿಗೆ ಮತ ಕೇಳುವ ಹಕ್ಕಿಲ್ಲ’ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.

ಅಶೋಕ ಬಣ್ಣದ, ಎಸ್‌. ಜಮಾದಾರ, ಇಮ್ತಿಯಾಜ್ ಮಾನ್ವಿ, ಶ್ರೀನಿವಾಸ ಕರಿ, ಶಂಕರಸಿಂಗ್ ರಜಪೂತ್, ಜೆ.ವಿ. ಬಾಗಡೆ, ಮಂಜುನಾಥ ಎಸ್. ಮುಳಗುಂದ, ಶಿವಣ್ಣ ಮುಳಗುಂದ ಅಂದಾನೆಪ್ಪ ಪಟ್ಟಣಶೆಟ್ಟಿ ಇದ್ದರು.

ಬಿಜೆಪಿ ಕಾರ್ಯಕರ್ತರಿಂದ ಮ್ಯಾರಥಾನ್‌: ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನ ಕಾಯಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಗುರುವಾರ ನಗರದಲ್ಲಿ ‘ಬದಲಾವಣೆಗಾಗಿ ಓಟ’ ಸಂಘಟಿಸಿ, ಮತಯಾಚನೆ ಮಾಡಿದರು.

ಸಿದ್ದಲಿಂಗ ನಗರದ ಬಯಲು ಆಂಜನೇಯ ದೇವಸ್ಥಾನದ ಆವರಣದಿಂದ ಪ್ರಾರಂಭವಾದ ಮ್ಯಾರಥಾನ್‌ ನಗರದ ವಿವಿಧ ವಾರ್ಡ್‌ಗಳ ಮೂಲಕ ಸಂಚರಿಸಿ ಜೆ.ಟಿ ಕಾಲೇಜು ಬಳಿ ಸಮಾರೋಪಗೊಂಡಿತು.

ಕಾರ್ಯಕರ್ತರ ಜತೆಗೆ ಓಡಿದ ಅನಿಲ್‌ ಮೆಣಸಿನಕಾಯಿ, ಓಟದ ಮಧ್ಯದಲ್ಲೇ ರಿಕ್ಷಾ ಚಾಲಕರು, ಬೀದಿ ವ್ಯಾಪಾರಸ್ಥರು, ಸಾರ್ವಜನಿಕರಲ್ಲಿ ಈ ಬಾರಿ ಬದಲಾವಣೆಗಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.ಪಟ್ಟಣದ ಕೆಲವು ಕಡೆ ಅಭಿಮಾನಿಗಳು ಅವರಿಗೆ ಹೂವು ಹಾಕಿ ಸ್ವಾಗತಿಸಿದರು.

ರಾಜು ಕುರಡಗಿ,ಕಾಂತಿಲಾಲ ಬನ್ಸಾಲಿ, ಜಗನ್ನಾಥಸಾ ಭಾಂಡಗೆ, ರವಿ ದಂಡಿನ, ಸಂತೋಷ ಮೇಲಗಿರಿ, ಅನೀಲ ಅಬ್ಬಿಗೇರಿ, ವಿನಾಯಕ ಮಾನ್ವಿ ಇದ್ದರು.

ಬಂಡಿ ಪಾದಯಾತ್ರೆ: ರೋಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪಬಂಡಿ ಅವರ ಗೆಲುವಿಗಾಗಿ ಪ್ರಾರ್ಥಿಸಿ, ಕಾರ್ಯಕರ್ತರು, ಅಭಿಮಾನಿಗಳು ಗುರುವಾರ ನಿಡಗುಂದಿಯಿಂದ ಗಜೇಂದ್ರಗಡದ ಕಾಲಕಾಲೇಶ್ವರ ಸನ್ನಿಧಿವರೆಗೆ 15 ಕಿ.ಮೀ ಪಾದಯಾತ್ರೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.