ADVERTISEMENT

ಬಣಿವೆಗೆ ಬೆಂಕಿ: ಸುಟ್ಟು ಕರಕಲಾದ ಎತ್ತು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 9:15 IST
Last Updated 21 ಫೆಬ್ರುವರಿ 2011, 9:15 IST

ಲಕ್ಷ್ಮೇಶ್ವರ: ಖಣದ ಪಕ್ಕದಲ್ಲಿನ ಗುಡಿಸಲಿಗೆ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಒಂದು ಎತ್ತು ಸೇರಿದಂತೆ ಜೋಳದ ಮೇವು, ತೊಗರಿ ಬೆಳೆ ಸುಟ್ಟು ಕರಕಲಾಗಿದೆ.ಪಟ್ಟಣದ ಸ್ಕೂಲ್ ಚಂದನದ ಹಿಂದಿನ ಬಯಲು ಜಾಗದಲ್ಲಿ ಹನಮಪ್ಪ ಧರ್ಮಪ್ಪ ಹೊಂಬಳ ಎಂಬ ರೈತರು ಗುಡಿಸಲು ಹಾಕಿಕೊಂಡು ಅದರ ಪಕ್ಕದಲ್ಲಿಯೇ ಬಣಿವೆ ಒಟ್ಟಿದ್ದರು. ಗುಡಿಸಲಿನಲ್ಲಿ ಎರಡು ಎತ್ತು ಹಾಗೂ ಎರಡು ಆಕಳುಗಳನ್ನು ಕಟ್ಟಲಾಗಿತ್ತು.

ಶನಿವಾರ ಮಧ್ಯಾಹ್ನ ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಸ್ವಲ್ಪೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಗುಡಿಸಲನ್ನೇ ಆವರಿಸಿಕೊಂಡಿತು. ಅಲ್ಲಿಯೇ ಮಲಗಿದ್ದ ಸಣ್ಣ ಮಗುವೊಂದು ಬೆಂಕಿಯನ್ನು ನೋಡಿ ಹಿರಿಯರಿಗೆ ತಿಳಿಸಿದಾಗ ಗುಡಿಸಲಿನಲ್ಲಿದ್ದ ಆಕಳು ಹಾಗೂ ಎತ್ತುಗಳನ್ನು ಬೆಂಕಿಯಿಂದ ಕಾಪಾಡಲು ಮುಂದಾದರು. ಆದರೆ ಅಷ್ಟರಲ್ಲಿಯೇ ಒಂದು ಎತ್ತು ಬೆಂಕಿಗೆ ಸಿಕ್ಕು ಸುಟ್ಟು ಕರಕಲಾಗಿತ್ತು. ಅಲ್ಲದೇ ಜೋಳದ ಮೇವು, ಖಣದಲ್ಲಿದ್ದ ತೊಗರಿ ಬೆಳೆಯೂ ಸಹ ಬೆಂಕಿಗೆ ಆಹುತಿಯಾಗಿದ್ದು ಒಟ್ಟು ಒಂದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ, ಪಶು ವೈದ್ಯಾಧಿಕಾರಿ ಹವಳದ, ಪುರಸಭೆ ಸದಸ್ಯರಾದ ತಿಪ್ಪಣ್ಣ ಸಂಶಿ, ಗೋವಿದಂಪ್ಪ ಶೆರಸೂರಿ, ನೀಲಪ್ಪ ಶೆರಸೂರಿ ಮತ್ತಿತರರು  ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.