ADVERTISEMENT

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ

ಕಾಶಿನಾಥ ಬಿಳಿಮಗ್ಗದ
Published 9 ಏಪ್ರಿಲ್ 2013, 7:18 IST
Last Updated 9 ಏಪ್ರಿಲ್ 2013, 7:18 IST

ಮುಂಡರಗಿ: ಪಟ್ಟಣದಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ಬಿಸಿಲಿನ ಬೆಗೆಯಿಂದ ತತ್ತರಿಸ ತೊಡಗಿದ್ದಾರೆ. ಸಾಮಾನ್ಯವಾಗಿ ವಾಡಿಕೆಯಂತೆ ಮಾರ್ಚ್ ಕೊನೆಯ ವಾರದಿಂದ (ಹೋಳಿ ಹುಣ್ಣಿಮೆ ನಂತರ) ತಾಲ್ಲೂಕಿನಾದ್ಯಂತ ಏರಿಕೆಯಾಗುವ ಬಿಸಿಲಿನ ಝಳ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತುಂಬಾ ತೀವ್ರವಾಗಿರುತ್ತದೆ.

ಪ್ರಸ್ತುತ ವರ್ಷ ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ಸುರಿಯುತ್ತಿರುವ ಬಿಸಿಲಿನ ಪ್ರಖರತೆ ಮೇ ತಿಂಗಳ ಮಧ್ಯಭಾಗದಲ್ಲಿ ಸುರಿಯುವ ಬೆಂಕಿ ಬಿಸಿಲನ್ನು ನೆನಪಿ ಸುತ್ತಿದ್ದು, ಮೇ ತಿಂಗಳಲ್ಲಿ ಇನ್ನೂ ಭಯಾನ ಕವಾದ ಬಿಸಿಲು ಬೀಳಲಿದೆ ಎಂದು ಜನಸಾಮಾನ್ಯರು ಅಂದಾಜಿಸುತ್ತಿದ್ದಾರೆ.

ಬೆಳಿಗ್ಗೆ10ಗಂಟೆಯಾಗುತ್ತಿದ್ದಂತೆಯೇ ನಿಧಾನವಾಗಿ ಹೆಚ್ಚಾಗುವ ಬಿಸಿಲಿನ ಝಳ ಮಧ್ಯಾಹ್ನ 2ಗಂಟೆ ಯಾಗುತ್ತಿದ್ದಂತೆಯೇ ಉಚ್ಛ್ರಾಯ ಸ್ಥಿತಿ ತಲುಪಿ ಜನ ಹಾಗೂ ಜಾನುವಾರುಗಳನ್ನು ಹೈರಾಣು ಮಾಡಿ ಬಿಡುತ್ತದೆ.  ಮಧ್ಯಾಹ್ನ 12ಗಂಟೆಯಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುವ ಸ್ಥಿತಿವಂತ ಜನತೆ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಫ್ಯಾನ್, ಏರ್ ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ.

ಬಡ ಜನತೆ ಮನೆಯ ಮುಂದಿನ ಆವಾರ, ಕಟ್ಟೆ ಅಥವಾ ಹತ್ತಿರದ ಗಿಡ ಮರಗಳ ಆಶ್ರಯ ಪಡೆದು ಕೊಂಡು ಬಿಸಿಲಿನ ಝಳಕ್ಕೆ ನಿಟ್ಟುಸಿರು ಬಿಡುತ್ತಾ ಗಾಳಿ ಬೀಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಕೃಷಿ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಮತ್ತು ರೈತಾಪಿ ಜನರು ತಮ್ಮ ಜಾನುವಾರುಗಳ ಸಮೇತ ಮಧ್ಯಾಹ್ನ ದೊಳಗೆ ಮನೆ ಸೇರಲು ಹಾತೊರೆಯುತ್ತಿರುತ್ತಾರೆ.

ಕಳೆದ ಒಂದು ವಾರದಿಂದ ಬಿಸಿಲಿನ ಪ್ರಖರತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ತಂಪು ಪಾನೀಯಗಳ ಅಂಗಡಿ ಮಾಲೀಕರಿಗೆ ಶುಕ್ರದೆಸೆ ತಿರುಗಿದಂತಾಗಿದೆ. ಪಟ್ಟಣದಲ್ಲಿರುವ ಬಹುತೇಕ ತಂಪು ಪಾನೀಯಗಳ ಅಂಗಡಿಗಳು ಗ್ರಾಹಕರಿಂದ ಗಿಜಿಗೂಡುತ್ತಿವೆ.
ಬೆಳಿಗ್ಗೆ 10ಗಂಟೆಯಿಂದ ಪ್ರಾರಂಭವಾಗುವ ತಂಪು ಪಾನೀಯಗಳ ವ್ಯಾಪಾರ ರಾತ್ರಿ ಎಂಟು ಗಂಟೆಯವರೆಗೂ ಭರದಿಂದ ಸಾಗುತ್ತಿದೆ. ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ವ್ಯಾಪಾರ ಜೋರಾಗಿ ನಡೆದಿದ್ದು, ಎಲ್ಲ ವರ್ಗದ ಜನರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ.

ಯುಗಾದಿ ಕಳೆದ ನಂತರ ಈ ಸಾರಿ ಉತ್ತಮ ಮಳೆಯಾಗಬಹುದು ಎಂದು ರೈತರು ಅಂದಾಜಿಸಿದ್ದು, ಯುಗಾದಿ ನಂತರ ಒಂದೆರಡು ದೊಡ್ಡ ಮಳೆ ಬೀಳುವವರೆಗೂ ಬಿಸಿಲಿನ ಪ್ರಖರತೆ ಕಡಿಮೆಯಾಗುವ ಸಾಧ್ಯತೆಗಳಿಲ್ಲ. ತಕ್ಷಣಕ್ಕೆ ಮಳೆಯಾಗದಿದ್ದರೆ ಮೇ ತಿಂಗಳಿನಲ್ಲಿ ಇನ್ನೂ ಭಯಂಕರವಾದ ಬಿಸಿಲು ಬೀಳುವ ಸಾಧ್ಯತೆ ಇದೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪಟ್ಟಣದ ಹುಲಿಗೆವ್ವ `ಪ್ರತೀ ವರ್ಷಕ್ಕಿಂತ ಈ ವರ್ಷ ಭಾಳ ಬಿಸಲ ಬೀಳಾಕ ಹತೈತ್ರಿ. ಈಗ ಇಂತ ಬಿಸಿಲ ಬಿದ್ರ ಇನ್ನು ಮುಂದ ಎಂತಾ ಬಿಸಿಲು ಬೀಳತೈತೊ ಏನ್ರಿ. ಇಂತಾ ಉರಿ ಬಿಸಿಲಾಗ ಜನಾ, ದನಾ ಕರಾ ಬದುಕೋದು ಹ್ಯಾಂಗ್ರಿ. ಮಳಿದೇವ ದೌಡ ಕಣ್ಣಬಿಟ್ರ ಬದಕ್ತೆವ್ರಿ ಇಲ್ಲಾಂದ್ರ ಇನ್ನೂ ಕಷ್ಟಾಗತ್ರಿ' ಎಂದು ಆತಂಕ ವ್ಯಕ್ತಪಡಿಸಿದಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.