ADVERTISEMENT

ಮಹದಾಯಿ ಹೆಸರಿನಲ್ಲಿ ಶಾ ಮತಯಾಚನೆ

ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ಪ್ರಚಾರ: ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 12:50 IST
Last Updated 8 ಮೇ 2018, 12:50 IST
ನರಗುಂದದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾತನಾಡಿದರು. ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಅವರು ಶಾ ಭಾಷಣವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದರು
ನರಗುಂದದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾತನಾಡಿದರು. ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಅವರು ಶಾ ಭಾಷಣವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದರು   

ನರಗುಂದ: ರೈತ ಬಂಡಾಯದ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ನರಗುಂದದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಮಹದಾಯಿ ಹೆಸರಿನಲ್ಲಿ ಮತಯಾಚನೆ ಮಾಡಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಮಹದಾಯಿ ನೀರು, ಈ ಭಾಗದ ರೈತರ ಕೃಷಿ ಭೂಮಿಯಲ್ಲಿ ಹರಿಯಲಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇವೆ. ಎಲ್ಲ ಬ್ಯಾಂಕ್‌ಗಳಲ್ಲಿನ ₹1 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಅವರಿಗೆ ಮತ ನೀಡಿ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ಸಿದ್ದರಾಮಯ್ಯ ಅವರಿಗೆ ಸ್ವಂತ ಕ್ಷೇತ್ರದಲ್ಲಿ ನೆಲೆ ಇಲ್ಲದೆ ಬದಾಮಿಗೆ ಓಡಿ ಬಂದಿದ್ದಾರೆ. ಅಲ್ಲಿಯೂ ಅವರು ಗೆಲ್ಲಲಾರರು. ಸ್ವಂತ ಕ್ಷೇತ್ರವನ್ನೇ ಗೆಲ್ಲಲಾಗದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹೇಗೆ ಗೆಲ್ಲಿಸುತ್ತಾರೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಕಾಂಗ್ರೆಸ್‌ ಸರ್ಕಾರ ಎಸ್‌ಬಿಪಿಐ, ಪಿಎಫ್‌ಐ, ಓವೈಸಿ ಜತೆ ಸೇರಿ ಇಡೀ ರಾಜ್ಯವನ್ನು ಅಪರಾಧ ಚಟುವಟಿಕೆಗಳ ತಾಣವಾಗಿ ಮಾಡಿದೆ. 24 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹ್ಯಾರಿಸ್, ಜಾರ್ಜ್ ಅವರಿಂದ ಹವಾಲಾ ಹಣ ಸಂಗ್ರಹಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಗನ್ನಾಥರಾವ್‌ಗೆ ನಮನ: ಜನಸಂಘದ ಸಂಸ್ಥಾಪಕ ಪಟ್ಟಣದ ಜಗನ್ನಾಥರಾವ್‌ ಜೋಶಿ ಹಾಗೂ ಬಂಡಾಯದ ರೂವಾರಿ ಭಾಸ್ಕರ್‌ರಾವ್‌ ಭಾವೆ ಅವರನ್ನು ಅಮಿತ್‌ ಶಾ ಭಾಷಣದಲ್ಲಿ  ನೆನೆದರು.

ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಮಾತನಾಡಿ, ‘ಭ್ರಷ್ಟಾಚಾರದಲ್ಲಿ ದೇಶವನ್ನು ನಂ.1 ಸ್ಥಾನಕ್ಕೆ ತಂದ ಕಾಂಗ್ರೆಸ್‌ ಸರ್ಕಾರವನ್ನು ಇಲ್ಲವಾಗಿಸಬೇಕು. ಯಡಿಯೂರಪ್ಪನವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ವಸಂತ ಜೋಗಣ್ಣವರ, ಮಲ್ಲಪ್ಪ ಮೇಟಿ, ಎಸ್‌.ಆರ್‌.ಹಿರೇಮಠ, ಜಿ.ಪಿ.ಪಾಟೀಲ, ರವಿ ದಂಡಿನ, ಚಂದ್ರು ದಂಡಿನ, ಎನ್‌.ವಿ.ಮೇಟಿ, ಬಿ.ಕೆ.ಗುಜಮಾಗಡಿ, ಎಂ.ಎಸ್‌.ಕರಿಗೌಡ್ರ, ಎಸ್‌.ಬಿ.ಕರಿಗೌಡ್ರ ಇದ್ದರು.ಉರಿಬಿಸಿಲು ಲೆಕ್ಕಿಸದೆ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

**
ಯಾರಿಗೆ ವಂದೇ ಮಾತರಂ ಹಾಡಲು ಸಮಯವಿಲ್ಲವೋ, ಅಂಥವರು ದೇಶದ ಪ್ರಗತಿ ಬಗ್ಗೆ ಚಿಂತಿಸುವುದು ಅಸಾಧ್ಯ. ರಾಹುಲ್‌ ಬಾಬಾಗೆ ಈ ದೇಶದ ಬಗ್ಗೆ ಕಳಕಳಿ ಇಲ್ಲ. ಇಂಥವರನ್ನು ಜನರು ತಿರಸ್ಕರಿಬೇಕು
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.