ADVERTISEMENT

ಮುಖ್ಯವಾಹಿನಿಗೆ ಬರಲು ಎಚ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 6:40 IST
Last Updated 14 ಅಕ್ಟೋಬರ್ 2011, 6:40 IST

ಗದಗ: ಸುಡುಗಾಡು ಸಿದ್ಧರ ಜನಾಂಗ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಸಲಹೆ ನೀಡಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿಂದೂ ಸುಡುಗಾಡ ಸಿದ್ಧರ ಹಳೆ ವಿದ್ಯಾರ್ಥಿಗಳ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಎರಡನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸುಡುಗಾಡು ಸಿದ್ಧರು ಎಂದಾಕ್ಷಣ ಭವಿಷ್ಯ ಹೇಳುವರು, ಭಿಕ್ಷಾಟನೆಯಲ್ಲಿ ತೊಡಗಿರುವರು ಎಂಬ ಚಿತ್ರಣ ಕಣ್ಮುಂದೆ ಬರುತ್ತದೆ. ಈ ಜನಾಂಗದಲ್ಲಿ ಬಹುತೇಕ ಜನರು ಅವಿದ್ಯಾವಂತರಿದ್ದಾರೆ. ಸಮಾಜದಲ್ಲಿ ಶಿಕ್ಷಣಕ್ಕೆ ವಿಶಿಷ್ಟ ಸ್ಥಾನವಿದೆ. ಸಮಾಜದ ಹಿರಿಯರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಸುಡುಗಾಡು ಸಿದ್ಧರ ಜನಾಂಗದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ, ಸಮಾಜ ಗುರುತಿಸುವಂತಾಗಬೇಕು ಎಂದು ಹೇಳಿದರು.

ಜನಾಂಗದಲ್ಲಿ ಮಹತ್ತರ ಬದಲಾವಣೆ ಆಗಬೇಕಿದೆ. ಅಜ್ಜ ಹಾಕಿದ ಆಲದ ಮರ ಎಂದು ಇಂದಿಗೂ ಬದುಕು ನಡೆಸುತ್ತಿರುವವರಲ್ಲಿ ಸುಡುಗಾಡು ಸಿದ್ಧರೇ ಹೆಚ್ಚು. ಅವಕಾಶ ಪಡೆಯಲು ಜನಾಂಗದ ಯುವಕರು ಹಿಂಜರಿಯಬಾರದು.
 

ಮಹತ್ತರ ಸಾಧನೆ ಮಾಡಿ ಇಡೀ ಸಮುದಾಯವೇ ನಿಬ್ಬೆರಗಾಗುವಂತೆ ಮಾಡುವ ಸಾಮರ್ಥ್ಯ ಈ ಜನಾಂಗದ ಯುವಕರಲ್ಲಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಸುಡುಗಾಡು ಸಿದ್ಧರ ಮಹಾಸಂಘದ ರಾಜ್ಯ ಘಟಕದ ಅಧ್ಯಕ್ಷ  ವೆಂಕಟಸ್ವಾಮಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಸದಸ್ಯ ಅನಿಲ ಗರಗ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರೇಮನಾಥ ಗರಗ, ಎಂ.ಎನ್. ಕರಿಯಪ್ಪ, ಹುಸೇನಪ್ಪ ಗಡ್ಡದವರ, ಪ್ರಕಾಶ ಕಲ್ಯಾಣವರ, ಕೊಟ್ರೇಶ್ವರ ವಿಭೂತಿ, ಶಿವು ವಿಭೂತಿ, ಡಾ. ಕೆ.ಎಂ. ಮೈತ್ರಿ ಮತ್ತಿತರರು ಹಾಜರಿದ್ದರು.

ಸಣ್ಣಹುಸೇನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಸ್ವಾಗತಿಸಿದರು. ದುರಗಪ್ಪ ವಿಭೂತಿ ವಂದಿಸಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT