ADVERTISEMENT

ರಸ್ತೆಗಿಳಿದರೆ ಮೈ, ಕೈ ನೋವು...

ಕೆ.ಎಸ್.ಸುನಿಲ್
Published 6 ಆಗಸ್ಟ್ 2012, 8:45 IST
Last Updated 6 ಆಗಸ್ಟ್ 2012, 8:45 IST
ರಸ್ತೆಗಿಳಿದರೆ ಮೈ, ಕೈ ನೋವು...
ರಸ್ತೆಗಿಳಿದರೆ ಮೈ, ಕೈ ನೋವು...   

ಗದಗ: `ಈ ರಸ್ತೆಯಲ್ಲಿ ಸಾಗಿದರೆ ಮೈ, ಕೈ ನೋವು ಗ್ಯಾರಂಟಿ~...ಇದು ನಗರದ ಹಳೇ ಬಸ್‌ನಿಲ್ದಾಣ ಪಕ್ಕದ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಂದ ಕೇಳಿ ಬರುವ ಮಾತು. ಇದಕ್ಕೆ ಕಾರಣವೂ ಇದೆ.

ನಗರದ ಹಳೇ ಬಸ್‌ನಿಲ್ದಾಣದ ಸಮೀಪದ ಮಾಳಶೆಟ್ಟಿ ವೃತ್ತದಿಂದ ಕೆ.ಎಚ್.ಪಾಟೀಲ  ವೃತ್ತದವರೆಗಿನ ರಸ್ತೆ ಹದಗೆಟ್ಟು ಹಲವು ವರ್ಷ ಕಳೆದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮಳೆ ಬಂದರಂತೂ ರಸ್ತೆಯ ಸ್ಥಿತಿ ಹೇಳತೀರದು. ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಬಂದಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ.


ಇದು ಹಳೇ ಬಸ್‌ಸ್ಟ್ಯಾಂಡ್ ಪಕ್ಕದ ರಸ್ತೆ ಸಮಸ್ಯೆ ಮಾತ್ರವಲ್ಲ. ನಗರದ ಬಹುತೇಕ ರಸ್ತೆಗಳ ಸ್ಥಿತಿ ಹೀಗೆಯೇ ಇದೆ. ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ.  ಮಳೆ ಬಂದರಂತೂ ನೀರು ತುಂಬಿ ಕೊಂಡು ಗುಂಡಿ ಕಾಣದೆ ಎಷ್ಟೋ ವಾಹನಗಳು ಸಿಲುಕಿ ಪರದಾಡಿದ ಹಲವು ನಿದರ್ಶನಗಳು ಉಂಟು.

ರಸ್ತೆ ಪಕ್ಕದಲ್ಲಿಯೇ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಇರುವುದರಿಂದ ಸಹಜವಾಗಿ  ಜನರ ಮತ್ತು ವಾಹನ ದಟ್ಟಣೆ ಹೆಚ್ಚು. ಬಸ್‌ನಿಲ್ದಾಣ ಅಕ್ಕಪಕ್ಕ ಕಿರಾಣಿ, ಬಟ್ಟೆ, ಹಣ್ಣು ಮತ್ತು ಇತರೆ ಅಂಗಡಿಗಳು ಇವೆ. ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸುವ ಜನರು ಇಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು.

ಇನ್ನು ಮಾರುಕಟ್ಟೆ ರಸ್ತೆಯ ಸ್ಥಿತಿಯಂತೂ ಹೇಳತೀರದು. ಎರಡು ಕಿ.ಮೀ. ರಸ್ತೆಯಲ್ಲಿ 1.5 ಕಿ.ಮೀ. ರಸ್ತೆ ಹಾಳಾಗಿದೆ. ದೂರದ ಊರು ಮತ್ತು ರಾಜ್ಯಗಳಿಂದ ಭಾರಿ ವಾಹನಗಳಲ್ಲಿ ಲಾರಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ತುಂಬಿಕೊಂಡು ಇಲ್ಲಿಗೆ ತರಲಾಗುತ್ತದೆ.

ಇದೇ ರಸ್ತೆಯಲ್ಲಿ ಬಸ್‌ಗಳು, ದ್ವಿಚಕ್ರ ವಾಹನಗಳು ಮತ್ತು ಸಾಕಷ್ಟು ತೊಂದರೆಯು ಆಗಿದೆ. ಮಳೆ ಬಂದ ಸಂದರ್ಭದಲ್ಲಿ ರಸ್ತೆತುಂಬ ನೀರು ನಿಂತು ಓಡಾಡಲು ಆಗುವುದಿಲ್ಲ. ಈ ನಡುವೆ ರಸ್ತೆ ಮಧ್ಯೆ ವಿದ್ಯುತ್ ಕಂಬ ಹಾಕಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂಬ ಮಾತು ಕೇಳಿ ಬಂದಿದೆ.

`ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನ ಪ್ರತಿನಿಧಿಗಳು ಬಂದು ನೋಡಿದ್ರೆ ಗೊತ್ತಾಗುತ್ತೆ ರಸ್ತೆ ಹೇಗಿದೆ ಅಂತ. ಬೇರೆ ರಸ್ತೆಯಲ್ಲಿ ಹೋಗೋ ಣವೆಂದರೆ ದೂರವಾಗುತ್ತದೆ. ಅದಕ್ಕೆ ಈ ರಸ್ತೆಯಲ್ಲಿ ಓಡಾಡುತ್ತಿದ್ದೇವೆ~ ಎನುತ್ತಾರೆ ಟಂಟಂ ಚಾಲಕ ಶಿವು.

`ರೋಟರಿ ಸರ್ಕಲ್‌ನಿಂದ ಕೆ.ಎಚ್.ಪಾಟೀಲ ವೃತ್ತ, ಮೈಕ್ರೋ ಸ್ಟೇಷನ್‌ನಿಂದ ಬನ್ನಿಕಟ್ಟಿವರೆಗೂ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಈಗ ಮೈಕ್ರೋ ಸ್ಟೇಷನ್‌ನಿಂದ ಬಸ್‌ನಿಲ್ದಾಣದವರೆಗೆ ಕಾಂಕ್ರಿಟ್ ರಸ್ತೆ ಮಾಡಲಾಗುವುದು. ಇದಕ್ಕಾಗಿ ಒಂದು ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸ ಲಾಗಿದೆ. ಅನುಮತಿ ಬಂದ ಬಳಿಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು~ ಎಂದು ನಗರಸಭೆ ಆಯುಕ್ತ ಶಿವಣ್ಣ ಮುಳಗುಂದ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT