ADVERTISEMENT

ಶಿಕ್ಷಣಕ್ಕೆ ಸಹಾಯ ಪುಣ್ಯದ ಕಾರ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 11:10 IST
Last Updated 4 ಜನವರಿ 2011, 11:10 IST

ಗದಗ:  ಮಕ್ಕಳ ಶಿಕ್ಷಣಕ್ಕೆ ಸಹಾಯ ಒದಗಿಸುವುದು ಪುಣ್ಯದ ಕಾರ್ಯ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಂಕರ ಬುಚಡಿ ಹೇಳಿದರು. ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಹಳೇ ಬನಶಂಕರಿ ದೇವಸ್ಥಾನದಲ್ಲಿ ನಡೆದ ದೇವಾಂಗ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್ಥಿಕ ಸಮಸ್ಯೆ, ಬಡತನ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು. ಸಮಾಜ ಎಚ್ಚೆತ್ತು ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಬೇಕು. ಜೊತೆಗೆ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಮಾತ್ರ ಎಲ್ಲ ಸಮಾಜಗಳು ಸುಶಿಕ್ಷಿತವಾಗಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಬರದ್ವಾಡ ಅಧ್ಯಕ್ಷತೆ ವಹಿಸಿ, ಸಂಘದಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಅವಶ್ಯಕತೆ ಎಂದು ತಿಳಿಸಿದರು. ಸಂಘದ ಹಾಗೂ ಸಮಾಜದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯ ಬ್ಯಾಂಕ್ ನಿವೃತ್ತ ನೌಕರ ಶಾಮಸುಂದರ ಬರದ್ವಾಡ, ಅಂಚೆ ಇಲಾಖೆಯ ನೌಕರ ಸಿ.ಎಸ್. ಶಾಲದಾರ ಅವರನ್ನು ಸನ್ಮಾನಿಸಲಾಯಿತು. ವಿನಾಯಕ ಹುಲ್ಲೂರ ಮತ್ತು ಜಿಲ್ಲೆಯ ಐದೂ ತಾಲೂಕಿನ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಹಳೇ ಬನಶಂಕರಿ ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಎಂ.ವಿ. ಪಟ್ಟಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಈಶ್ವರ ಗಾರ್ಗಿ, ವಿ.ಆರ್.ಕೋಟಿ, ಆರ್.ಟಿ. ಕೊಪ್ಪಳ, ಪ್ರಸನ್ನ ದಿಗಿದಿಗಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.