ADVERTISEMENT

ಸಮಾಜ ಸೇವೆಯ ದಿಂಗಾಲೇಶ್ವರ ಮಠ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 6:15 IST
Last Updated 17 ಏಪ್ರಿಲ್ 2011, 6:15 IST

ಲಕ್ಷ್ಮೇಶ್ವರ: ನಾಡಿನಲ್ಲಿ ಅನೇಕ ಕ್ರಿಯಾಶೀಲ ಮಠಗಳಿದ್ದು, ಶರಣರ ಕಾಯಕ ಸಿದ್ಧಾಂತ ಅಳವಡಿಸಿಕೊಂಡು ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿವೆ. ಇಂಥ ಅಪರೂಪದ ಮಠಗಳಲ್ಲಿ ಲಕ್ಷ್ಮೇಶ್ವರ ಸಮೀಪದ ಬಾಳೇಹೊಸೂರು ದಿಂಗಾಲೇಶ್ವರಮಠವೂ ಒಂದಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿದೆ.

ಇತಿಹಾಸದ ಪ್ರಕಾರ ದಿಂಗಾಲೇಶ್ವರಮಠವು 15ನೇ ಶತಮಾನದಲ್ಲಿ ಸ್ಥಾಪನೆಗೊಂಡಿದ್ದು ಶ್ರೀಮಠಕ್ಕೆ ನೇಮಕಗೊಳ್ಳುವ ಸ್ವಾಮಿಗಳಿಗೆ ‘ದಿಂಗಾಲೇಶ್ವರ’ ಎಂದು ನಾಮಕರಣ ಮಾಡುವ ಪರಂಪರೆ ಇಂದಿಗೂ ಇದೆ. ‘ದಿಂಗಾಲೇಶ್ವರ’ ಎಂದರೆ ದಿಕ್ಕು ಕಾಲಗಳನ್ನು ಮೀರಿ ನಿಂತವ ಎಂದು ಅರ್ಥ. ಇಂಥ ಅಪರೂಪದ ಮಠಕ್ಕೆ 1994ರಲ್ಲಿ ಮಠಾಧಿಪತಿಗಳಾಗಿ ಆಯ್ಕೆಯಾದ ಕುಮಾರ ದಿಂಗಾಲೇಶ್ವರರು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇವರು ಪ್ರವಚನ ಮಾಡುವುದರಲ್ಲಿ ಸಿದ್ಧಹಸ್ತರು. ಹೀಗಾಗಿ ಇವರಿಗೆ ‘ಪ್ರವಚನ ಸೂರ್ಯ’ ಎಂಬ ಬಿರುದೂ ಇದೆ.

ಜಿಲ್ಲೆ ಹಾಗೂ ತಾಲ್ಲೂಕಿನ ಕೊನೆಯ ಗ್ರಾಮವಾಗಿರುವ ಬಾಳೇಹೊಸೂರು ಆರ್ಥಿಕ ಮತ್ತು ಮೂಲ ಸೌಕರ್ಯಗಳಿಂದ ವಂಚಿತವಾದ ಊರು. ಆದರೆ ತಪೋನಿಷ್ಠ ಕುಮಾರ ದಿಂಗಾಲೇಶ್ವರ ಸ್ವಾಮೀಜಿಯಿಂದಾಗಿ ಬಾಳೇಹೊಸೂರು ಇಂದು ಇಡೀ ನಾಡಿನಲ್ಲಿಯೇ ಹೆಸರು ವಾಸಿಯಾಗಿದೆ.

ADVERTISEMENT

ಎರಡು ಕೋಟಿಗೂ ಮಿಕ್ಕಿ ಹಣ ಸಂಗ್ರಹಿಸಿ ಬೃಹತ್ತಾದ ಕೆಳ ಹಾಗೂ ಮೇಲಂತಸ್ತಿನ ಸುಂದರ ಶಿಲಾಮಠ ನಿರ್ಮಿಸಿ ದಿಂಗಾಲೇಶ್ವರ ಮಠವನ್ನು ಮಾದರಿ ಮಠವನ್ನಾಗಿ ಮಾಡಿದ್ದಾರೆ. ಹದಿನೈದು ಎಕರೆ ಭೂಮಿ ಖರೀದಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಹತ್ತಾರು ಯೋಜನೆಗಳನ್ನು ರೂಪಿಸಿದ್ದು ಈಗಾಗಲೇ ಒಂದೆರಡು ಯೋಜನೆಗಳು ಕಾರ್ಯರೂಪಕ್ಕೆ ತರುವುದರ ಮೂಲಕ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ.

ಕಠಿಣ ರೋಗಗಳಿಗೆ ಆಯುರ್ವೇದ ಔಷಧ ನೀಡಿ ಗುಣಪಡಿಸುತ್ತಿದ್ದಾರೆ. ಶಿವಯೋಗ ಮಂದಿರ ಹಾಗೂ ಹಿಮಾಲಯದಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿತು ಅವುಗಳನ್ನು ಆಸಕ್ತರಿಗೆ ಪರಿಣಾಮಕಾರಿಯಾಗಿ ಕಲಿಸಿ ಆರೋಗ್ಯವಂತ ಸಮಾಜ ಕಟ್ಟಲು ಶ್ರಮಿಸುತ್ತಿದ್ದಾರೆ.

ಜೊತೆಗೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ. ಅಂಧಶ್ರದ್ಧೆ ಹಾಗೂ ಜಾತಿ ಪದ್ಧತಿ ನಿರ್ಮೂಲನೆಗಾಗಿ ಪ್ರವಚನ ರಂಗವನ್ನು ಆಯ್ಕೆ ಮಾಡಿಕೊಂಡಿರುವ ಕುಮಾರ ದಿಂಗಾಲೇಶ್ವರ ಸ್ವಾಮಿಗಳು ಆ ಮೂಲಕ ನಾಡಿನ ತುಂಬೆಲ್ಲ ಪರಿಣಾಮಕಾರಿ ಪ್ರವಚನ ಮಾಡುತ್ತ ಯುವ ಜನತೆಯಲ್ಲಿ ಜಾಗೃತೆ ಮೂಡಿಸುತ್ತಿದ್ದಾರೆ.

ಇಂಥ ಸಮಾಜ ಮುಖಿಮಠದಲ್ಲಿ ಇದೇ ಏ.18ರಿಂದ 26ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ತಮಗೆ ವಿದ್ಯೆ ಕಲಿಸಿದ ಗುರುವಿನ ನಾಣ್ಯ ತುಲಾಭಾರ ಹಮ್ಮಿಕೊಂಡಿರುವ ಕುಮಾರ ದಿಂಗಾಲೇಶ್ವರ ಸ್ವಾಮೀಜಿ  ಮಾದರಿಯಾಗಿದ್ದಾರೆ. ಸ್ವಾಮಿಗಳ ಸಮಾಜ ಸೇವೆಗೆ ಸಮುದಾಯದ ಸಹಾಯ ಸಹಕಾರ ಅವಶ್ಯ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.