ADVERTISEMENT

ಸೊರಗುತ್ತಿರುವ ತೊಗರಿ ಬೆಳೆ...

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 6:21 IST
Last Updated 7 ಫೆಬ್ರುವರಿ 2013, 6:21 IST
ಮಳೆ ಇಲ್ಲದೆ ಸೊರಗುತ್ತಿರುವ ತೊಗರಿ ಬೆಳೆ.
ಮಳೆ ಇಲ್ಲದೆ ಸೊರಗುತ್ತಿರುವ ತೊಗರಿ ಬೆಳೆ.   

ಗಜೇಂದ್ರಗಡ: ಮಳೆ ಇಲ್ಲದೇ ಬೆಳೆ ಇಲ್ಲ. ಬೆಳೆ ಬಂದಾಗ ಬೆಲೆ ಇಲ್ಲ. ಮಳೆ ಮತ್ತು ಮಾರುಕಟ್ಟೆ ಜೂಜಾಟದಲ್ಲಿ ತೊಗರಿ ಬೆಳೆಯುವ ಪ್ರದೇಶ ಬರಡಾಗಿದೆ. ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಇಳಿಕೆ ಆಗಿಲ್ಲ. ಬದಲಾಗಿ ಬರ ಮತ್ತು ಅಸಮರ್ಪಕ ಮಳೆಯ ಹಂಚಿಕೆಯಿಂದಾಗಿ ಬೆಳೆಯ ವ್ಯಾಪ್ತಿ ಮತ್ತು ಫಸಲಿನಲ್ಲಿ ಏರುಪೇರಾಗುತ್ತಿದೆ.

ಈ ಭಾಗದ ಸಾಗುವಳಿ ಕ್ಷೇತ್ರದಲ್ಲಿ ಶೇ.52 ರಷ್ಟು ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಶೇ.48 ರಷ್ಟು ಕೆಂಪು (ಮಸಾರಿ) ಪ್ರದೇಶವಿದೆ. ಮಸಾರಿ ಪ್ರದೇಶದ ಪ್ರಮುಖ ಬೆಳೆ ತೊಗರಿ.  ಹೀಗಾಗಿಯೇ ಈ ಭಾಗದ ಮಸಾರಿ ಪ್ರದೇಶವನ್ನು ತೊಗರಿ ಕಣಜ ಎಂದು ಕರೆಯಲಾಗುತ್ತದೆ.

ತೊಗರಿ ಕ್ಷೇತ್ರ ಕ್ಷೀಣಿಸಲು ಕಾರಣ?: ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕಳೆದ ಒಂದು ದಶಕದ ಹಿಂದೆ ಪ್ರತಿ ವರ್ಷ 33,485 ಹೆಕ್ಟೇರ್‌ಗೂ ಅಧಿಕ ಕ್ಷೇತ್ರದಲ್ಲಿ ತೊಗರಿ ಬೆಳೆ ಯಲಾಗುತ್ತಿತ್ತು. ಸದ್ಯದ  ಪರಿಸ್ಥಿತಿಯಲ್ಲಿ 1,525 ಹೆಕ್ಟೇರ್‌ಗೂ ಸೀಮಿತವಾಗಿದೆ. ಒಂದು ದಶಕ ದಿಂದ ಈಚೆಗೆ ಮಳೆಯ ಅನಿಶ್ಚಿತತೆ ವ್ಯಾಪಕವಾಗಿದೆ.

ಜತೆಗೆ ಕಾರ್ಮಿಕರ ಕೊರತೆ, ಗೊಬ್ಬರ-ಬೀಜದ ಬೆಲೆ ವ್ಯತ್ಯಯ, ಸಿಗದ ಬೆಲೆ, ಬದಲಾದ ಜೀವನ ಶೈಲಿ ಮತ್ತಿತರ ಕಾರಣಗಳಿಂದಾಗಿ ಇತರ ವೃತ್ತಿಗಳತ್ತ ಆಕರ್ಷಿತರಾಗುತ್ತಿದ್ದಾರೆ.  ಗುತ್ತಿಗೆ ಕಾರ್ಮಿಕ ಪದ್ಧತಿ ಪ್ರಾಬಲ್ಯ ಮೆರೆಯುತ್ತಿದೆ. ಇವೆಲ್ಲವುಗಳನ್ನು ಸಮರ್ಪಕವಾಗಿ ನಿರ್ವಹಿಸಿದರೂ ರೈತರಿಗೆ ಲಾಭ ಸಿಗುತ್ತಿಲ್ಲ. ಇದರಿಂದ ಕೃಷಿ ಬಗ್ಗೆ ನಿರಾಸಕ್ತಿ ಬೆಳೆಯುತ್ತಿದೆ. ಹೀಗಾಗಿಯೇ ತೊಗರಿ ಕ್ಷೇತ್ರ ಪಾತಾಳಕ್ಕೆ ಇಳಿದಿದೆ ಎನ್ನುತ್ತಾರೆ  ತೊಗರಿ ಬೆಳೆಗಾರ ಯಲ್ಲಪ್ಪ ಮದ್ನೇರಿ.

ಊಳುವವರ ಕೊರತೆ: ಕಳೆದ ಎರಡು ವರ್ಷಗಳಿಂದ ತಲೆದೊರಿರುವ ಭೀಕರ ಬರ ದಿಂದಾಗಿ ವಲಸೆ ಪ್ರಮಾಣ ಹೆಚ್ಚಿದೆ. ಬರದಿಂದ ಕೃಷಿ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿವೆ.  ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಶ್ರಮಕ್ಕೆ ತಕ್ಕ ಕೂಲಿ ದೊರೆಯುತ್ತಿಲ್ಲ. ಬೆಳಗ್ಗೆ ಯಿಂದ ಸಂಜೆವರೆಗೂ ಬೇವರು ಸುರಿಸುವ ಕೂಲಿ ಕಾರ್ಮಿಕರ ಬೇವರಿನ ಹನಿಗೆ ಬೆಲೆಯೇ ಇಲ್ಲ ದಂತಾಗಿದೆ. ಹೀಗಾಗಿ ಕೃಷಿ ಕೂಲಿಕಾರರು ಕೈತುಂಬ ಕಾಸು ಸಿಗುವ ಮಹಾನಗರಗಳತ್ತ ಮುಖ ಮಾಡು ತ್ತಿದ್ದಾರೆ. ಗ್ರಾಮಗಳೆಲ್ಲ ಜನರಿಲ್ಲದೆ ಭಣಗುಡುತ್ತಿವೆ.

ಕೃಷಿವಿರೋಧಿ ನೀತಿ: ತೊಗರಿ ಬಿತ್ತನೆ ಕಾಲದಲ್ಲಿ ಕ್ವಿಂಟಾಲ್‌ಗೆ 7 ಸಾವಿರ ದರವಿತ್ತು. ಫಸಲು ಬಂದಾಗ ಮೂರು ಸಾವಿರಕ್ಕೆ ಇಳಿಯಿತು. ಸಣ್ಣ ರೈತರಿಗೆ ದಾಸ್ತಾನು ಸಾಮರ್ಥ್ಯವಿಲ್ಲ. ತೊಗರಿ ಬೆಳೆ ಗಾರರು ಎಲ್ಲ ಬೆಳೆ ಮಾರಾಟ ಮಾಡಿದ ಬಳಿಕ ಕ್ವಿಂ ಟಾಲ್‌ಗೆ 7 ಸಾವಿರಕ್ಕೆ ಏರಿತು. ತೊಗರಿ ಮಂಡಳಿ ರಚಿಸಿದರೂ ಅನುದಾನ, ಸಿಬ್ಬಂದಿ ಕಲ್ಪಿಸಲಿಲ್ಲ.

ಸರ್ಕಾರಗಳ ಕೃಷಿ ವಿರೋಧಿ ನಿಲುವಿನಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆಯೇ ಹೊರತು ಭೂಮಿ ಕೊರತೆ ಇಲ್ಲ ಎಂದು ರೈತ ಹೋರಾಟಗಾರ ಕೂಡ್ಲೇಪ್ಪ ಗುಡಿಮನಿ ಆರೋಪಿಸಿದ್ದಾರೆ.

ಯಾಂತ್ರೀಕರಣಕ್ಕೆ ಒತ್ತು
ರೋಣ ತಾಲ್ಲೂಕಿನಲ್ಲಿ ಸಾಕಷ್ಟು ಕೃಷಿ ಭೂಮಿ ಇದ್ದರೂ ಕಾರ್ಮಿಕರ ಕೊರತೆ ಮತ್ತು ನೀರಿನ ಸಮಸ್ಯೆ ದೊಡ್ಡದಿದೆ.

ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರೀ ಕರಣಕ್ಕೆ ಒತ್ತು ನೀಡುತ್ತಿದ್ದೇವೆ. ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿ ನೀಡುತ್ತಿದ್ದೇವೆ ಎಂದು ತಾಲ್ಲೂಕು ಕೃಷಿ ನಿರ್ದೇಶಕರ ಎಸ.ಎ.ಸೂಡಿಶೆಟ್ಟರ 'ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.