ADVERTISEMENT

`ಹಣ ಗಳಿಕೆ ಜೀವನದ ಉದ್ದೇಶವಲ್ಲ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 7:41 IST
Last Updated 26 ಡಿಸೆಂಬರ್ 2012, 7:41 IST

ಮುಂಡರಗಿ: ಅನಿಶ್ಚಿತ ಮಳೆ, ಹವಾಮಾನದ ವೈಪರಿತ್ಯದಿಂದ ತಾಲ್ಲೂಕಿನ ರೈತರು ಕೃಷಿಯಿಂದ ಹಿಮ್ಮುಖವಾಗುತ್ತಿದ್ದಾರೆ. ಇಂಥ ಕಠಿಣ ಪರಿಸ್ಥಿ ತಿಯಲ್ಲಿ ಕೃಷಿಯನ್ನೆ ನಂಬಿಕೊಂಡು ನೂರಾರು ಕೃಷಿ ಕೂಲಿ ಕಾರ್ಮಿಕರಿಗೆ ನಿತ್ಯ ಉದ್ಯೋಗ ನೀಡುತ್ತಿರುವ ಹೇಮಗಿರೀಶ ಹಾವಿನಾಳ ರೈತರಿಗೆ ಮಾದರಿ ಯಾಗಿದ್ದಾರೆ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಯುವ ರೈತ ಹೇಮಗಿರಿಶ ಹಾವಿನಾಳ ಅವರ ಜನ್ಮದಿನ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಕೂಲಿ ಕಾರ್ಮಿಕರಿಗೆ ಸಾಮಗ್ರಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದು ಜನರೆಲ್ಲ ಹಣ, ಆಸ್ತಿ, ಸಂಪತ್ತಿನ ಹಿಂದೆ ಬಿದ್ದಿದ್ದು, ಹಣ ಗಳಿಸುವುದನ್ನೆ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ತಾವು ಗಳಿಸಿದ ಹಣವನ್ನು ಕೇವಲ ತಾವು ಮಾತ್ರ ಬಳಿಸಿ ಕೊಳ್ಳಬೇಕು ಎನ್ನುವ ಸ್ವಾರ್ಥವನ್ನು ಬೆಳೆಸಿಕೊಂಡಿದ್ದಾರೆ. ಅದನ್ನು ಬದಿಗೊತ್ತಿ ನಮ್ಮ ಗಳಿಕೆಯ ಕೆಲವು ಭಾಗವನ್ನು ದೀನರಿಗೆ, ಅಶಕ್ತರಿಗೆ, ಸಮಾಜ ಸೇವೆಗೆ ಮೀಸಲಿಡಬೇಕು. ಆ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಎಂದು ಸಲಹೆ ನಿಡಿದರು.

ಹೇಮಗಿರೀಶ ಹಾವಿನಾಳ ಅವರು ಜಾತಿ, ಮತ, ಪಂಥ, ಪಕ್ಷಗಳನ್ನು ಮೀರಿ ಜನಮನ್ನಣೆ ಗಳಿಸಿದ್ದು, ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕೃಷಿಯಿಂದಲೂ ಹಣ ಗಳಿಸಬಹುದು ಎನ್ನು ವುದನ್ನು ಇತರ ರೈತರಿಗೆ ಅವರು ತೋರಿಸಿ ಕೊಡು ತ್ತಿದ್ದಾರೆ. ಅವರು ಬಳಸುವ ಕೃಷಿ ತಂತ್ರ ಜ್ಞಾನ ಹಾಗೂ ಪದ್ಧತಿಗಳನ್ನು ಇತರ ರೈತರು ಅಳವಡಿಸಿ ಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ತಿಳಿಸಿದರು.

ಕಾರ್ಮಿಕರಿಗೆ ಹೊಸ ಬಟ್ಟೆ, ಪಾತ್ರೆ ಮೊದಲಾದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ.ಪಾಟೀಲ, ಈರಣ್ಣ ಹಣಜಿ, ಹೇಮಗಿರೀಶ ಹವಿನಾಳ ಮತ್ತಿತರರು ಮಾತನಾಡಿದರು. ಶಿರಹಟ್ಟಿ ಬಿಜೆಪಿ ಘಟಕದ  ಅಧ್ಯಕ್ಷ ಕೆ.ವಿ.ಹಂಚಿನಾಳ, ಕಾಂಗ್ರೆಸ್ ಮುಖಂಡ ದೇವಪ್ಪ ಕಂಬಳಿ, ಎಸ್.ವಿ.ಪಾಟೀಲ, ಎಂ.ಎಸ್.ಹೊಸಮಠ, ಗುರು ಪಾದಪ್ಪ ಹಾವಿನಾಳ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.