ADVERTISEMENT

ಹತ್ತು ದಿನದಲ್ಲಿ ಬರುತ್ತೇನೆ ಎಂದಿದ್ದ..!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 5:50 IST
Last Updated 16 ಮಾರ್ಚ್ 2011, 5:50 IST

ಡಂಬಳ: ‘ಮದುವೆ ತಯಾರಿ ಚೆನ್ನಾಗಿ ಮಾಡಿ. ನಾನು ಇನ್ನು ಹತ್ತು ದಿನಕ್ಕೆ ಬರುತ್ತೇನೆ. ಅಲ್ಲಿವರೆಗೂ ಏನೇನು ಸಿದ್ಧ ಮಾಡಬೇಕೊ ಎಲ್ಲ ಅಚ್ಚುಕಟ್ಟಾಗಿ ಮಾಡಿ. ಒಟ್ಟಿನಲ್ಲಿ ಮದುವೆ ಅದ್ಧೂರಿಯಾಗಿರಬೇಕು ಎಂದು ಸೋಮವಾರ  ಸಂಜೆ ನಾಲ್ಕು ಗಂಟೆಗೆ ಫೋನಿನಲ್ಲಿ ಮಾತನಾಡಿದ್ದ’ ಎನ್ನುತ್ತಲ್ಲೇ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳಲಾರದೆ ಬಿಕ್ಕಿ-ಬಿಕ್ಕಿ ಅಳುವುದಕ್ಕೆ ಪ್ರಾರಂಭಿಸಿದರು ಶಂಕರಗೌಡ.

ಅಸ್ಸಾಂನ ಇಂಡೋ-ಭೂತಾನ್ ಗಡಿಯಲ್ಲಿ ಸೋಮವಾರ ಬೋಡೋ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ವೀರಮರಣ ಹೊಂದಿದ ಕುಬೇರಗೌಡ (26) ಅವರ ಹುಟ್ಟೂರಾದ ಗದಗ ಜಿಲ್ಲೆಯ ಡೋಣಿಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು. ಸಾಂತ್ವನ ಹೇಳಲು ಮನೆಗೆ ಬಂದವರ ಬಳಿ ತಮ್ಮ ದುಃಖ ತೋಡಿಕೊಳ್ಳುತ್ತಿದ್ದ ಕುಬೇರಗೌಡನ ಅಣ್ಣ ಶಂಕರಗೌಡ, ‘ನನ್ನ ತಮ್ಮ ಕೇವಲ ತಮ್ಮನಾಗಿ ಇರಲಿಲ್ಲ. 26 ವರ್ಷವಾದರೂ 76 ವರ್ಷದವರ ರೀತಿ ಯೋಚನೆ ಮಾಡುತ್ತಿದ್ದ. ಹಿರಿಯನ ಸ್ಥಾನದಲ್ಲಿ ನಿಂತು ಮನೆಯನ್ನು ಮುನ್ನಡೆಸುತ್ತಿದ್ದ. ನಮ್ಮಿಬ್ಬರಿಗೂ ಮೇ 11ಕ್ಕೆ ಮದುವೆ. ಆತನಿಗೆ ಸೋದರ ಮಾವನ ಮಗಳ ಜೊತೆಗೆ ನಿಶ್ಚಯವಾಗಿತ್ತು. ಇದೇ ತಿಂಗಳ 25ರಂದು ರಜೆ ಹಾಕಿ ಬರುವವನ್ನಿದ್ದ. ಆದರೆ ಈಗ’ ಎನ್ನುತ್ತ ಮುಂದೆ ಮಾತು ಬಾರದೆ ಮೌನಕ್ಕೆ ಶರಣಾದರು.

ಡೋಣಿಯ ಹನುಮಂತಗೌಡ ಹೊಸಮನಿ ಹಾಗೂ ಈರಮ್ಮ ಅವರ ಎರಡನೇ ಮಗನಾದ ಕುಬೇರಗೌಡ ಬಿಎಸ್‌ಎಫ್‌ಗೆ ಸೇರಿದ ನಂತರ ಅಣ್ಣ ಹಾಗೂ ತಮ್ಮನ ವಿದ್ಯಾಭ್ಯಾಸ ಮಾಡಿಸಿ, ಅವರನ್ನು ಒಂದು ಹಂತಕ್ಕೆ ತರುವಲ್ಲಿ ಬಹಳ ಶ್ರಮ ಪಟ್ಟಿದ್ದಾರೆ. ಕೇವಲ ಮೂರು ಎಕರೆ ಜಮೀನು. ಕಿತ್ತು ತಿನ್ನುವ ಬಡತನ. ಆದರೂ ಛಲ ಬಿಡಲಿಲ್ಲ. ಬಂದ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ, ಎಲ್ಲರ ಜೀವನವನ್ನು ಒಂದು ಸರಿಯಾದ ದಾರಿಗೆ ತಂದರು. ಹೊಸ ಮನೆ ಕಟ್ಟಿಸಿದರು.

ಕ್ರೀಡೆಯಲ್ಲೂ ಮುಂದು: ಊರಿನ ಜನರ ಬಾಯಲ್ಲಿ ‘ಕೂಬ್ಯಾ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಕುಬೇರ ಗೌಡ  ಕ್ರೀಡೆಯಲ್ಲೂ ಮುಂದು. ಕಬಡ್ಡಿ, ವಾಲಿಬಾಲ್, ರನ್ನಿಂಗ್ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದರು. ಕೆಲಸ ಮಾಡುತ್ತಿದ್ದ 10ನೇ ಬೆಟಾಲಿಯನ್ ಪ್ರತಿನಿಧಿಸಿ ಹತ್ತಾರು ಪದಕಗಳನ್ನು ಪಡೆದುಕೊಂಡಿದ್ದಾರೆ. ಊರಿಗೆ ಬಂದರಂತೂ ಯಾವಾಗಲೂ ಹತ್ತಿಪ್ಪತ್ತು ಸ್ನೇಹಿತರು ಜೊತೆಗೆ ಇರಲೇಬೇಕು. “ಕೂಬ್ಯಾ ತನ್ನ ಎಲ್ಲ ಸ್ನೇಹಿತರ ಹೆಸರು, ವಿದ್ಯಾರ್ಹತೆ, ಕೆಲಸ ಮುಂತಾದ ವಿವರವನ್ನು ಬರೆದು ಚಾರ್ಟ್ ಮಾಡಿ ಹಳೆಯ ಮನೆಯ ಮಹಡಿ ಮೇಲಿದ್ದ ಕೊಠಡಿಯಲ್ಲಿ ನೇತು ಹಾಕಿದ್ದ. ಪ್ರತಿಬಾರಿ ಆತ ಹೋಗಬೇಕಾದರೂ ಸುಮಾರು ಹತ್ತು ಜನ ಸ್ನೇಹಿತರು ಗದುಗಿನ ತನಕ ಹೋಗಿ ರೈಲಿಗೆ ಹತ್ತಿಸಿ ಬರುತ್ತಿದ್ದೇವು” ಎಂದು ಬಾಲ್ಯದ ಗೆಳೆಯ ಶರಣ್ಣಯ್ಯ ಕಲ್ಲಯ್ಯನ ಮಠ ಗುಣಗಾನ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.