ಗದಗ: ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ಎಲರೂ ದಾನ, ಧರ್ಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅಸುಂಡಿ ಅಭಿಪ್ರಾಯಪಟ್ಟರು.
ನಗರದಲ್ಲಿ ರಾಮಕೃಷ್ಣ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದಾನ, ಧರ್ಮದ ಮನೋಭಾವ ಜನರಲ್ಲಿ ಬಿತ್ತುತ್ತಿರುವ ಸಂಘ, ಸಂಸ್ಥೆಗಳು ಬೆಳೆಯಬೇಕು. ಮನುಷ್ಯ ಧರ್ಮ ಬಿಟ್ಟು ನಡೆಯಬಾರದು. ಇರುವುದರಲ್ಲಿ ಸ್ವಲ್ಪ ದಾನ ಮಾಡಿ ಬೇರೆಯವರಿಗೆ ಆಸರೆಯಾಗಬೇಕು. ಕಾಮ, ಕ್ರೋದ, ಮೋಹ, ಮದ ಹಾಗೂ ಭಯದಲ್ಲಿ ಬಾಳುವರು ಧರ್ಮ ಪಾಲಿಸುವಲ್ಲಿ ಹಿಂದೆ ಉಳಿಯುತ್ತಾರೆ ಎಂದು ನುಡಿದರು.
ರಾಣೆಬೆನ್ನೂರು ಶಿವಾನಂದಾಶ್ರಮದ ಈಶ್ವರಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಅನ್ನದ ಅಗಳಿನಲ್ಲೂ ಪರಮಾತ್ಮ ಇದ್ದಾನೆ ಎಂಬುದನ್ನು ಅರಿತು ನಡೆಯಬೇಕು. ಎಲ್ಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದೆ. ಹಸಿದವನಿಗೆ ಅನ್ನ ಹಾಕಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪಿ.ಎಚ್.ಕಬಾಡಿ ಮಾತನಾಡಿ, ದೇಶದಲ್ಲಿ 50 ವರ್ಷಗಳ ಹಿಂದೆ ಇದ್ದ ಬಡತನ ಒಂದಿಷ್ಟು ಕಡಿಮೆಯಾಗಿಲ್ಲ. ಬಡತನ ನಿವಾರಣೆಗೆ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಸ್ವಾರ್ಥ ಬಿಟ್ಟು ಜೀವನ ನಡೆಸಿದರೆ ಬದುಕು ಬಂಗಾರವಾಗುತ್ತದೆ ಎಂದು ಸಲಹೆ ನೀಡಿದರು.
ನರಸಭೆ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಉದ್ಯಮಿ ಅಂದಾನಪ್ಪ ಪಟ್ಟಣಶೆಟ್ಟಿ, ಶಿವಸಂಗಮ ಕಂಪೆನಿ ವ್ಯವಸ್ಥಾಪಕ ಜಿ.ಬಿ.ಪಲ್ಲೇದ, ನಿಲಯದ ಗೌರವಾಧ್ಯಕ್ಷ ಕೃಷ್ಣಾರಾಜ ಹೆಬಸೂರ, ಸಮಾಜ ಸೇವಕ ಗಂಗಣ್ಣ ಕೋಟಿ ಮಾತನಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್.ಎನ್.ಪಾಟೀಲ, ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ವೆಂಕನಗೌಡ್ರ ಗೋವಿಂದಗೌಡರ, ಉದ್ದಿಮೆದಾರರಾದ ದಿನೇಶಕುಮಾರ ಪಾಲರೇಚಾ, ಮಹೇಶಭಟ್ ಜ್ಯೋಶಿ ಮೊದಲಾದವರು ಹಾಜರಿದ್ದರು.
ಕೋಶಾಧ್ಯಕ್ಷ ಜಗದೀಶ ಬಿದರೂರ ಸ್ವಾಗತಿಸಿದರು, ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಹದ್ದಣ್ಣವರ ನಿರೂಪಿಸಿದರು, ಎಸ್.ಎಸ್.ಕಳಾಸಾಪೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.