ಗದಗ: ‘ಅಮೃತ ಭಾರತ ಸ್ಟೇಷನ್ ಯೋಜನೆ ಅಡಿ ಕೇಂದ್ರ ಸರ್ಕಾರವು ದೇಶದ ವಿವಿಧೆಡೆಯಲ್ಲಿರುವ 1,275 ರೈಲ್ವೆ ನಿಲ್ದಾಣಗಳನ್ನು ₹25 ಸಾವಿರ ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸುತ್ತಿದೆ. ಈ ಪೈಕಿ ಗುರುವಾರ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ ₹23.24 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಗದಗ ರೈಲ್ವೆ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
‘ಎಬಿಎಸ್ಎಸ್ ಅಡಿ ಅಭಿವೃದ್ಧಿಗೊಂಡಿರುವ ರೈಲ್ವೆ ನಿಲ್ದಾಣಗಳು ಪ್ರಯಾಣಿಕರಿಗೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಿವೆ. ಜನರು ಇವುಗಳ ಸೇವೆಯನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು’ ಎಂದರು.
‘ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದನಂತರ ರೈಲ್ವೆ, ಬಂದರು ಹಾಗೂ ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ. ರಾಜ್ಯದಲ್ಲಿ ಈವರೆಗೆ ₹51 ಸಾವಿರ ಕೋಟಿ ವೆಚ್ಚದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ. 2025-26ರಲ್ಲಿ ₹7,600 ಕೋಟಿ ಅನುದಾನ ಒದಗಿಸಿದ್ದಾರೆ’ ಎಂದು ತಿಳಿಸಿದರು.
‘ಕರ್ನಾಟಕದಲ್ಲಿ 1,659 ಕಿ.ಮೀ ಹೊಸ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಶ್ರೀಲಂಕಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ. ರೈಲ್ವೆ ಸುರಕ್ಷಾ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದು, ₹1,16,514 ಕೋಟಿ ವೆಚ್ಚ ಮಾಡಲಾಗುತ್ತಿದೆ. ಗಂಟೆಗೆ 130 ಕಿ.ಮೀ ವೇಗದಲ್ಲಿ ಸಾಗುವ ವಂದೇ ಭಾರತ್ ರೈಲುಗಳು ದೇಶ ಪ್ರಗತಿ ಪಥದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿವೆ’ ಎಂದರು.
ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದ್ದು ಆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನರಗುಂದ ಶಾಸಕ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ವಿ.ಎಚ್.ಹಿರೇಗೌಡ್ರ, ತಾತನಗೌಡ ಪಾಟೀಲ, ಎಸ್.ಸಿ.ಸಂಶಿಮಠ, ಸಂಗಮೇಶ ದುಂದೂರ, ಹುಬ್ಬಳ್ಳಿ ವಿಭಾಗೀಯ ಸೀನಿಯರ್ ಡಿವಿಜಿನಲ್ ಪರ್ಸನಲ್ ಆಫೀಸರ್ ಆರ್.ಪ್ರಸಾದ್, ರೈಲ್ವೆ ಇಲಾಖೆಯ ಸಿಬ್ಬಂದಿ ಇದ್ದರು.
ವಿಕಸಿತ ಭಾರತಕ್ಕೆ ಸಾಕ್ಷಿ: ಬೊಮ್ಮಾಯಿ
‘ಗದಗ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಈ ಭಾಗದ ಕೈಗಾರಿಕೆ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬಲ ತುಂಬಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ‘1884ರಲ್ಲಿ ಆರಂಭವಾದ ಗದಗ ರೈಲ್ವೆ ನಿಲ್ದಾಣಕ್ಕೆ ಭವ್ಯ ಇತಿಹಾಸವಿದೆ. ಇಂಥ ನಿಲ್ದಾಣವನ್ನು ಅಭಿವೃದ್ಧಿ ಮಾಡಿರುವುದು ಸಂತಸ ತಂದಿದೆ. ರೈಲ್ವೆ ನಿಲ್ದಾಣದ ಅಭಿವೃದ್ಧಿ ಜತೆಗೆ ಗದಗ- ವಾಡಿ ಗದಗ- ಯಲವಗಿ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಜತೆಗೆ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಿರುವುದು ವಿಕಸಿತ ಭಾರತಕ್ಕೆ ಸಾಕ್ಷಿಯಾಗಿದೆ’ ಎಂದರು.
ಅಮೃತ ಭಾರತ ಸ್ಟೇಷನ್ ಯೋಜನೆ ದೇಶದ ಸಂಸ್ಕೃತಿಯ ಪ್ರತೀಕ: ಪ್ರಧಾನಿ ಮೋದಿ
‘ದೇಶದಲ್ಲಿ ಆಧುನಿಕ ಸೌಕರ್ಯವುಳ್ಳ ರೈಲ್ವೆ ಸೇವೆ ಒದಗಿಸುವುದು ಅಮೃತ ಭಾರತ ಸ್ಟೇಷನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಬಡವರು ಮಧ್ಯಮವರ್ಗದವರಿಗೂ ವಿಶ್ವ ದರ್ಜೆಯ ಸೌಲಭ್ಯ ಕಲ್ಪಿಸುವ ಕನಸು ಇದರಿಂದ ಸಾಕಾರಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಜಸ್ಥಾನದ ಬಿಕಾನೇರ್ ರೈಲು ನಿಲ್ದಾಣದಲ್ಲಿ ವರ್ಚುವಲ್ ವೇದಿಕೆ ಮೂಲಕ ರೈಲ್ವೆ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು ‘ದೇಶ ಹೊಸ ಪ್ರಗತಿಯತ್ತ ಸಾಗುತ್ತಿದೆ. ಪ್ರತಿ ರಾಜ್ಯದಲ್ಲಿಯೂ ಯುವಜನರಿಗೆ ಉದ್ಯೋಗ ಅವಕಾಶ ಲಭಿಸುತ್ತಿವೆ. ಅಮೃತ ಭಾರತ ಸ್ಟೇಷನ್ ಯೋಜನೆಯು ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ರೈಲ್ವೆ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಜವಾಬ್ದಾರಿ ಮಹತ್ತರವಾಗಿದ್ದು ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿದೆ’ ಎಂದರು. ‘ಕಾರ್ಮಿಕರಿಗೆ ಉದ್ಯಮಿದಾರರಿಗೆ ವ್ಯಾಪಾರಸ್ಥರಿಗೆ ಸರಕು ಸಾಗಾಣಿಕೆ ಮಾಡಲು ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೆಟಕುವ ದರದಲ್ಲಿ ರೈಲ್ವೆ ಸೌಲಭ್ಯವು ದೊರಕಿದಂತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.