ADVERTISEMENT

‘ಗೋವಾಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ’

ಮಹದಾಯಿ ಧರಣಿ 914ನೇ ದಿನಕ್ಕೆ; ಅಧಿಕಾರಿಗಳಿಂದ ಬೇಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 10:22 IST
Last Updated 15 ಜನವರಿ 2018, 10:22 IST
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 914ನೇ ದಿನ ಭಾನುವಾರ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿದರು
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 914ನೇ ದಿನ ಭಾನುವಾರ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿದರು   

ನರಗುಂದ: ‘ಮಹದಾಯಿ ಹೋರಾಟಕ್ಕೆ ಹಿನ್ನಡೆ ಉಂಟು ಮಾಡಲು ರಾಜಕೀಯ ಪಕ್ಷಗಳು ಒಂದಿಲ್ಲೊಂದು ತಂತ್ರ ಹೆಣೆಯುತ್ತಿವೆ. ಗೋವಾ ಮುಖ್ಯಮಂತ್ರಿ ತಮ್ಮ ನಿಲುವು ಬದಲಿಸಿರುವುದು ಖಂಡನಾರ್ಹ’ ಎಂದು ರೈತ ಸೇನೆ ರಾಜ್ಯ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 914ನೇ ದಿನ ಭಾನುವಾರ ಅವರು ಮಾತನಾಡಿದರು.

‘ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಗೆ ಶನಿವಾರ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಭೇಟಿ ನೀಡಿದ್ದು, ನೀರು ಹಂಚಿಕೆ ಬಿಕ್ಕಟ್ಟು ನ್ಯಾಯ ಮಂಡಳಿ ಮುಂದೆಯೇ ಇತ್ಯರ್ಥಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ರಾಜ್ಯದ ನೀರಾವರಿ ಸಚಿವರು ಇದನ್ನು ನೋಡಿಕೊಂಡು ಸುಮ್ಮನಿರಬಾರದು. ಕೂಡಲೇ ಗೋವಾಕ್ಕೆ ಭೇಟಿ ನೀಡಿ, ಅಲ್ಲಿ ಮಹದಾಯಿ ನೀರು ಯಾವುದಕ್ಕೆ ಬಳಕೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿ, ವರದಿ ಸಿದ್ಧಪಡಿಸಿ, ಫೆ. 22ರ ಒಳಗೆ ನ್ಯಾಯಮಂಡಳಿ ಮುಂದೆ ಸಲ್ಲಿಸಬೇಕು’ ಎಂದು ಶಂಕ್ರಣ್ಣ ಆಗ್ರಹಿಸಿದರು.

ADVERTISEMENT

ಮಹದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿ, ನೀರಾವರಿ ಸಚಿವರು ಗೋವಾಕ್ಕೆ ಶಕ್ತವಾಗಿ ಪ್ರತಿರೋಧ ತೋರಬೇಕು. ಇಲ್ಲದಿದ್ದರೆ ರೈತರೇ ಈ ಕೆಲಸ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹೋರಾಟ ಸಮಿತಿ ಹಿರಿಯ ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿದರು. ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ಬಸಮ್ಮ ಐನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.