
HK ಪಾಟೀಲ
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲಾಗಿದೆ. ಇದರ ಜತೆಗೆ ಇನ್ನೂ ಎಂಟು ದೇವಸ್ಥಾನಗಳನ್ನು ಫೆಬ್ರುವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ ಮಾಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಷ್ಟೆ ಅಲ್ಲದೇ, ಲಕ್ಕುಂಡಿಯ ಇನ್ನೂ 20 ದೇವಸ್ಥಾನಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಸಮಗ್ರ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದರಿಂದಾಗಿ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಒಳಪಡಲಿವೆ. ಅವುಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದರು.
ಮಣ್ಣಿನ ಅಡಿಯಲ್ಲಿ ಸ್ಪಷ್ಟವಾಗಿ ಕಾಣದ ದೇವಸ್ಥಾನಗಳನ್ನು ಗುರುತಿಸಿ ಮಾರ್ಚ್ ಒಳಗೆ ಮರುಜೀವ ನೀಡಲು ವಿಶೇಷ ಉತ್ಖನನ ನಡೆಸಲಾಗುವುದು ಎಂದರು.
ಜ.10ರಂದು ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಉದ್ಯೋಗ ಮತ್ತು ಮನೆ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾದ ಅಧಿಕೃತ ಆದೇಶದ ಪತ್ರಗಳನ್ನು ಗಣರಾಜ್ಯೋತ್ಸವ ದಿನದಂದು ಹಸ್ತಾಂತರಿಸಲಾಗುವುದು ಎಂದರು.
ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ, ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ, ನಿಧಿಯ ಕಾಲಘಟ್ಟವನ್ನು ನಿರ್ಣಯಿಸಿ ಪ್ರೋತ್ಸಾಹ ಧನ ನೀಡಲಾಗುವುದು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.