ADVERTISEMENT

ವಲಸೆ ಪಕ್ಷಿಗಳ ಸ್ವಚ್ಛಂದ ತಾಣ: ಜಲರಾಶಿಯಿಂದ ಕಂಗೊಳಿಸುತ್ತಿರುವ ಶೆಟ್ಟಿಕೇರಿ ಕೆರೆ

ನಾಗರಾಜ ಎಸ್‌.ಹಣಗಿ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
ಒಡಲ ತುಂಬ ನೀರು ತುಂಬಿಕೊಂಡು ಶೋಭಿಸುತ್ತಿರುವ ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಕೆರೆ
ಒಡಲ ತುಂಬ ನೀರು ತುಂಬಿಕೊಂಡು ಶೋಭಿಸುತ್ತಿರುವ ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಕೆರೆ   

ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಶೆಟ್ಟಿಕೇರಿ ಕೆರೆ ಸಂಪೂರ್ಣ ತುಂಬಿದ್ದು, ಪ್ರಕೃತಿ ಪ್ರಿಯರ ಕಣ್ಣಿಗೆ ಮುದ, ಮನಸ್ಸಿಗೆ ಖುಷಿ ನೀಡುತ್ತಿದೆ.

ಅಂದಾಜು 234 ಎಕರೆ ವಿಶಾಲವಾಗಿರುವ ಇದು, ನೀರಾವರಿ ಕೆರೆಯೂ ಆಗಿತ್ತು. ಕೊಳವೆಬಾವಿಗಳ ಹಾವಳಿ ಬರುವ ಮೊದಲು ಕೆರೆಯ ನೀರಿನಿಂದ ಶೆಟ್ಟಿಕೇರಿ, ಕುಂದ್ರಳ್ಳಿ, ಚನ್ನಪಟ್ಟಣ ಗ್ರಾಮಗಳ ರೈತರು ನೀರಾವರಿ ಮಾಡುತ್ತಿದ್ದರು. ಈಗ ಲೂ ಕೆರೆ ನೀರು ಹರಿಸಲು ಸಣ್ಣ ಸಣ್ಣ ಕಾಲುವೆಗಳು ಇರುವುದನ್ನು ಕಾಣ ಬಹುದು. ಒಂದು ದಶಕದಿಂದ ವರುಣನ ಅವಕೃಪೆಯಿಂದಾಗಿ ಕೆರೆ ತುಂಬಿರಲಿಲ್ಲ. ಆದರೆ ಕಳೆದ ವರ್ಷದಿಂದ ಉತ್ತಮ ಮಳೆ ಆಗುತ್ತಿದ್ದು, ಕೆರೆ ತುಂಬಿಕೊಂಡಿದೆ.

ಮಾಗಡಿ ಕೆರೆಗೆ ಬರುವ ವಿದೇಶಿ ಪಕ್ಷಿಗಳು ಅಲ್ಲಿನ ಗದ್ದಲದ ವಾತಾವರಣ ಬಿಟ್ಟು ಶೆಟ್ಟಿಕೇರಿ ಕೆರೆಗೂ ಧಾವಿಸುತ್ತಿವೆ. ಪ್ರತಿವರ್ಷ ಸಾವಿರಾರು ಪಕ್ಷಿಗಳು ಈ ಕೆರೆಯಲ್ಲಿ ವಿಹರಿಸುತ್ತವೆ. ಸುತ್ತಲೂ ಗುಡ್ಡ ಹಾಗೂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ನೆಡುತೋಪಿನ ಮಧ್ಯ ಕೆರೆ ಇರುವುದು ವಲಸೆ ಪಕ್ಷಿಗಳಿಗೆ ಅತ್ಯುತ್ತಮ ಸ್ಥಳವಾಗಿ ಮಾರ್ಪಟ್ಟಿದೆ.

ADVERTISEMENT

‘ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಗಳನ್ನು ಬೇಟೆಯಾಡಲು ಕೆಲವರು ಹೊಂಚು ಹಾಕುತ್ತಿರುತ್ತಾರೆ. ಅಂಥವರನ್ನು ಹಿಡಿದು ಶಿಕ್ಷೆ ಕೊಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ. ಕೆರೆ ಖಾಲಿ ಆದಾಗ ಚೆನ್ನಪಟ್ಟಣ ಮತ್ತು ಅಕ್ಕಿಗುಂದ ತಾಂಡಾ ಕಡೆಯಿಂದ ಕೆರೆಯಲ್ಲಿನ ಮರಳನ್ನು ಕದ್ದು ಸಾಗಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ನಮ್ಮೂರಿನ ಕೆರೆ ನೀರಿನಿಂದಲೇ ರೈತರು ನೀರಾವರಿ ಮಾಡುತ್ತಿದ್ದರು. ಇಲ್ಲಿ ಮೀನು ಸಾಕಣೆ ಜೋರಾಗಿತ್ತು. ಚಳಿಗಾಲದಲ್ಲಿ ಬೇರೆ ಬೇರೆ ದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಆದರೆ ಕೆಲವು ದುಷ್ಟರು ಅವುಗಳನ್ನು ಬೇಟೆ ಆಡುತ್ತಾರೆ. ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಶೆಟ್ಟಿಕೇರಿ ಗ್ರಾಮದ ನಿವಾಸಿ ದೀಪಕ ಲಮಾಣಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.