ADVERTISEMENT

ನರಗುಂದ: ಹಿರೇಮಠಕ್ಕೆ ತೇರು ನಿರ್ಮಿಸಿಕೊಟ್ಟ ಮುಸ್ಲಿಂ ಟ್ರಸ್ಟ್

ಬಂಡಾಯದ ನಾಡು ನರಗುಂದದಲ್ಲಿ ಭಾವೈಕ್ಯದ ಚೆಂಬೆಳಕು

ಬಸವರಾಜ ಹಲಕುರ್ಕಿ
Published 5 ಮಾರ್ಚ್ 2024, 21:12 IST
Last Updated 5 ಮಾರ್ಚ್ 2024, 21:12 IST
₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತೇರು
₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತೇರು   

ನರಗುಂದ: ಐತಿಹಾಸಿಕ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರೆಗೆ ಪಟ್ಟಣದ ಇಮಾಮ್‌ಸಾಹೇಬ ಮಹ್ಮದಸಾಬ ಶರಣರ ಸೇವಾ ಟ್ರಸ್ಟ್ ಸದಸ್ಯರು ₹30 ಲಕ್ಷ ವೆಚ್ಚದಲ್ಲಿ ನೂತನ ತೇರು ನಿರ್ಮಿಸಿಕೊಟ್ಟಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಮೆಹಬೂಬ್‌ ಸುಬಾನಿ ದರ್ಗಾದ ಬಾಬು ಅಜ್ಜನವರು ಪಂಚಪೀಠಾಧೀಶ್ವರರಲ್ಲಿ ಒಬ್ಬರಾದ ಉಜ್ಜಯನಿ ಜಗದ್ಗುರು ಸಮ್ಮುಖದಲ್ಲಿ ಹಿರೇಮಠಕ್ಕೆ ನೂತನ ತೇರು ನಿರ್ಮಿಸಿಕೊಡುವ ಪ್ರಸ್ತಾಪ ಮಾಡಿದ್ದರು. ಆದರೆ, ಕೋವಿಡ್‌–19 ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.

2023ರಲ್ಲಿ ಮತ್ತೆ ಉಜ್ಜಯನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ನೂತನ ತೇರಿನ ನಿರ್ಮಾಣದ ಪ್ರಸ್ತಾಪವಾದಾಗ ಬಾಬುಸಾಬ ಶರಣರು, ‘ಒಂದು ವರ್ಷದೊಳಗೆ ನೂತನ ತೇರನ್ನು ಸೇವಾ ಟ್ರಸ್ಟ್ ಮೂಲಕ ನಿರ್ಮಿಸಿ ಕೊಡಲಾಗುವುದು’ ಎಂದು ಹೇಳಿದ್ದರು. ಅದರಂತೆ ಈಗ ರಥ ನಿರ್ಮಿಸಿಕೊಟ್ಟಿದ್ದಾರೆ.

ADVERTISEMENT

ಇಡಗುಂಜಿ ಗಣಪತಿ ದೇವಸ್ಥಾನದ ಪ್ರಧಾನ ರಥಶಿಲ್ಪಿ ಮೂಲಕ 25 ಅಡಿ ಎತ್ತರದ ರಥ ನಿರ್ಮಿಸಲಾಗಿದೆ. ಮುಸ್ಲಿಂ ಶರಣರು ರಥದ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದರೂ ವೀರಶೈವ ಲಿಂಗಾಯತ ಧರ್ಮದ ಸಂಪ್ರದಾಯದಂತೆ ರಥ ಸಿದ್ಧಗೊಂಡಿರುವುದು ವಿಶೇಷವಾಗಿದೆ.

ಮಾರ್ಚ್‌ 7ರಂದು ಮೆಹಬೂಬ್‌ ಸುಬಾನಿ ದರ್ಗಾದಿಂದ ಪಂಚಗ್ರಹ ಗುಡ್ಡದ ಹಿರೇಮಠದವರೆಗೆ ರಥದ ಮೆರವಣಿಗೆ ನಡೆಯಲಿದೆ. ನಂತರ ಐದು ದಿನಗಳ ಕಾಲ ನೂತನ ರಥಕ್ಕೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಮಾರ್ಚ್‌ 11ರಂದು ಉಜ್ಜಯಿನಿ ಜಗದ್ಗುರುಗಳ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. 

₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತೇರು
₹30 ಲಕ್ಷ ವೆಚ್ಚದ ಈ ರಥವನ್ನು ಇಡಗುಂಜಿಯ ಗಂಗಾಧರ ಆಚಾರ್ಯರು ನಿರ್ಮಿಸಿದ್ದಾರೆ. ಆ ಧರ್ಮ ಈ ಧರ್ಮ ಎನ್ನದೇ ಇದು ಸರ್ವಧರ್ಮದವರಿಂದ ನಿರ್ಮಾಣಗೊಂಡಿರುವ ರಥವಾಗಿದೆ. ಭಾವೈಕ್ಯತೆಯತ್ತ ಸಾಗಲು ನಾಂದಿ ಹಾಡಿದೆ
ಬಾಬು ಅಜ್ಜನವರು ಮೆಹಬೂಬ್ ಸುಬಾನಿ ದರ್ಗಾ ನರಗುಂದ
ನಮ್ಮ ಮಠದ ಪರಂಪರೆ ಭಾವೈಕ್ಯತೆಗೆ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಮುಸ್ಲಿಂ ಸಮುದಾಯದ ಇಮಾಮ್‌ಸಾಹೇಬ ಮಹ್ಮದಸಾಬ ಶರಣರ ಸೇವಾ ಟ್ರಸ್ಟ್ ಮೂಲಕ ಬಾಬುಸಾಬ ಅಜ್ಜನವರು ತೇರು ನಿರ್ಮಿಸಿಕೊಟ್ಟು ಭಾವೈಕ್ಯ ಮೆರೆದಿದ್ದಾರೆ
ಸಿದ್ದಲಿಂಗ ಶಿವಾಚಾರ್ಯರು ಪಂಚಗ್ರಹ ಗುಡ್ಡದ ಹಿರೇಮಠ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.