ಗಜೇಂದ್ರಗಡ: ಸಮೀಪದ ಕತ್ರಾಳ ಗ್ರಾಮದ ಹತ್ತಿರ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹರಿದು 31 ಕುರಿಗಳು ಸಾವನ್ನಪ್ಪಿವೆ.
ಕುರಿಗಳು ಕೊಪ್ಪಳ ಜಿಲ್ಲೆಯ ಕನಗೇರಿ ಹಾಗೂ ಕಾಟಾಪುರ ಗ್ರಾಮಗಳ ಉಮೇಶ ಗೊಲ್ಲರ, ದುಲ್ಲೆಪ್ಪ ಅಮರಾಪುರ ಎಂಬುವವರಿಗೆ ಸೇರಿದ್ದವು. ಕುರಿಗಳನ್ನು ಮೇಯಿಸಿಕೊಂಡು ರಾಜೂರ ಗ್ರಾಮದ ಹೊಲವೊಂದರಲ್ಲಿದ್ದ ಹಟ್ಟಿಗೆ ಕುರಿಗಳನ್ನು ಹೊಡೆದುಕೊಂಡು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದಾಗ ಗಜೇಂದ್ರಗಡದಿಂದ ಬಾದಾಮಿ ಕಡೆಗೆ ಹೊರಟಿದ್ದ ಬಸ್ ಕುರಿಗಳ ಮೇಲೆ ಹರಿದಿದೆ. ಬಸ್ ಹರಿದ ರಭಸಕ್ಕೆ ರಸ್ತೆ ತುಂಬ ಕುರಿಗಳು ಮಾಂಸದ ಮುದ್ದೆಯಾಗಿ ಬಿದ್ದಿದ್ದವು. ಕೆಲವು ಕುರಿಗಳ ಭ್ರೂಣಗಳು ರಸ್ತೆ ಮೇಲೆ ಬಿದ್ದಿರುವುದನ್ನು ಕಂಡು ಸ್ಥಳೀಯರು ಮರುಗಿದರು.
ಘಟನಾ ಸ್ಥಳಕ್ಕೆ ಗಜೇಂದ್ರಗಡ ಹಾಗೂ ಯಲಬುರ್ಗಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಬಸ್ ಏಕಾಏಕಿ ಕುರಿಗಳ ಹಿಂಡಿನ ಮೇಲೆ ಬಂತು. ಭಯದಿಂದ ನಾವು ಓಡಿ ಪ್ರಾಣ ಉಳಿಸಿಕೊಂಡೆವು. 31 ಕುರಿಗಳು ಸತ್ತು, 19 ಕುರಿಗಳು ಕಾಲು ಮುರಿದುಕೊಂಡು ನರಳುತ್ತಿವೆ. ಹಿಂಡಿನಲ್ಲಿ ಬಹಳಷ್ಟು ಬೇರೆಯವರ ಪಾಲಿನ ಕುರಿಗಳಿವೆ. ಸರ್ಕಾರ ಪರಿಹಾರ ಕೊಡಿಸಬೇಕು’ ಎಂದು ಕುರಿಗಾಹಿ ಉಮೇಶ ಗೊಲ್ಲರ ಅಲವತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.