ADVERTISEMENT

ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರು ಸಾವು, ಏಳು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:21 IST
Last Updated 26 ಫೆಬ್ರುವರಿ 2021, 2:21 IST
ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನದ ದೃಶ್ಯ
ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನದ ದೃಶ್ಯ   

ಲಕ್ಷ್ಮೇಶ್ವರ: ಪಟ್ಟಣದ ಗುಂಜಳ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮಹಿಳಾ ಕೂಲಿಕಾರರು ಸ್ಥಳದಲ್ಲಿಯೇ ಮೃತಪಟ್ಟು 7 ಜನ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

9 ಜನ ಮಹಿಳೆಯರು ನಸುಕಿನಲ್ಲಿಯೇ ಕಡಲೆ ಕೀಳುವ ಕೆಲಸ ಹೋಗಿದ್ದರು. ಕೆಲಸ ಮುಗಿಸಿ ಕಡಲೆ ಹೇರಿದ್ದ ಟ್ರ್ಯಾಕ್ಟರ್‌ನಲ್ಲಿ ಕುಳಿತು ಮನೆಗೆ ಬರುವ ವೇಳೆ ಟ್ರ್ಯಾಕ್ಟರ್ ಕಂದಕಕ್ಕೆ ಮುಗುಚಿದೆ. ಟ್ರ್ಯಾಕ್ಟರ್‌ ಅಡಿ ಸಿಲುಕಿದ್ದ ಸರೋಜವ್ವ ಫಕ್ಕೀರಪ್ಪ ಹಿತ್ತಲಮನಿ (35), ಸೋಮವ್ವ ಮುದಕಪ್ಪ ಗಡದವರ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಉಳಿದ 7 ಜನ ಕೂಲಿಕಾರರು ತೀವ್ರಗಾಯಗೊಂಡಿದ್ದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್‌ಗೆ ದಾಖಲಿಸಲಾಗಿದೆ.

ADVERTISEMENT

ದುರಗವ್ವ ದೂಳಮ್ಮನವರ, ಬಸವ್ವ ಗಡದವರ, ಗಂಗವ್ವ ಹೊಸಮನಿ, ಬಸವ್ವ ಸಂದಿಮನಿ, ಶೋಭಕ್ಕ ದೂಳಮ್ಮನವರ, ಸುಂದರಮ್ಮ ಗಡದವರ, ಯಲ್ಲವ್ವ ಬೂದಿಹಾಳ ಗಾಯಗೊಂಡವರು.

ಘಟನೆಯ ಬಳಿಕ ಮೃತ ಮತ್ತು ಗಾಯಾಳುಗಳ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಗೋಳಾಡಿದ ದೃಶ್ಯ ಮನ ಕಲುಕುವಂತಿತ್ತು. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಶಿವಯೋಗಿ ಲೋಹಾರ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.