ಗದಗ: ‘ಪ್ರತಿಯೊಬ್ಬ ಮಹಿಳೆಯಲ್ಲಿಯೂ ಒಬ್ಬಳು ಮಹಾಕಾಳಿ, ಸರಸ್ವತಿ, ಲಕ್ಷ್ಮಿ ನೆಲೆಸಿರುತ್ತಾಳೆ. ಆ ಭಾವವನ್ನು ಜಾಗೃತಗೊಳಿಸಿಕೊಂಡರೆ ಸಾಮಾನ್ಯ ನಾರಿ ಕೂಡ ಎತ್ತರದ ಸ್ಥಾನಕ್ಕೆ ಏರಬಲ್ಲಳು’ ಎಂದು ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ನಿರಂಜನಪ್ರಭು ಚನ್ನಮಲ್ಲ ಸ್ವಾಮೀಜಿ ಹೇಳಿದರು.
ನಗರದ ಮುಳಗುಂದ ನಾಕಾ ಬಳಿಯ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ, ಅನ್ನಪೂರ್ಣೇಶ್ವರಿ ದೇವಿ ಜಾತ್ರೆ ಹಾಗೂ ಜನಪದ ಜೀವನ ದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಶ್ರೀದೇವಿಯು ಮಹಾಲಕ್ಷ್ಮಿಯಾಗಿ ಬಡತನ, ಸರಸ್ವತಿಯಾಗಿ ಅಜ್ಞಾನ ದೂರ ಮಾಡುತ್ತಾಳೆ. ದುರ್ಗಿಯಾಗಿ ದುಷ್ಟರನ್ನು ದಮನ ಮಾಡುತ್ತಾಳೆ. ಈ ಭಾವ, ಈ ಅನುಸಂಧಾನ ಶ್ರೀದೇವಿ ಜತೆಗೆ ಇದ್ದರೆ ಮನೆಯ ಮಕ್ಕಳು ಸಾಮಾನ್ಯ ಮಕ್ಕಳಾಗದೇ ವಿಶಿಷ್ಟ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ’ ಎಂದು ಹೇಳಿದರು.
ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಜಾನಪದ ವಿದ್ವಾಂಸ ಶಂಭು ಬಳಿಗಾರ ಅವರು ‘ಜನಪದ ಜೀವನ ದರ್ಶನ’ ವಿಷಯ ಕುರಿತು ಉಪನ್ಯಾಸ ನೀಡಿದರು.
ರೇಣುಕಾ ಶರಣ ಪಾಟೀಲ, ಉದ್ಯಮಿ ಕಿರಣ ಪ್ರಕಾಶ ಭೂಮಾ, ಎಸ್.ಎಸ್.ಶಿವನಗೌಡ್ರ, ಸದಾಶಿವ ಚನ್ನಪ್ಪನವರ, ಹಿರಿಯ ಲೆಕ್ಕ ಪರಿಶೋಧಕರಾದ ವೀರೇಶ ಕೂಗು ಅವರನ್ನು ಸನ್ಮಾನಿಸಲಾಯಿತು.
ಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ.ಸಂಶಿಮಠ, ಅಧ್ಯಕ್ಷ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷೆ ಸುವರ್ಣಾ ಮದರಿಮಠ ವೇದಿಕೆಯಲ್ಲಿದ್ದರು.
ಪೂಜಾ ಸಮಿತಿ ಅಧ್ಯಕ್ಷ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷೆ ಅಶ್ವಿನಿ ನೀಲಗುಂದ, ವಿ.ಎಚ್.ದೇಸಾಯಿಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.