ADVERTISEMENT

ತೆರಿಗೆ ಕಟ್ಟಿದರೇ ಮಾತ್ರ ಜಾಹಿರಾತು ಅಳವಡಿಕೆ: ಶಾಸಕ ಸಿ.ಸಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:19 IST
Last Updated 1 ಜೂನ್ 2025, 13:19 IST
ನರಗುಂದದಲ್ಲಿ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಪೌರನೌಕರರು ಶಾಸಕ ಸಿ.ಸಿ. ಪಾಟೀಲ ಅವರನ್ನು ಸನ್ಮಾನಿಸಿ ಮನವಿ ಸಲ್ಲಿಸಿದರು
ನರಗುಂದದಲ್ಲಿ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಪೌರನೌಕರರು ಶಾಸಕ ಸಿ.ಸಿ. ಪಾಟೀಲ ಅವರನ್ನು ಸನ್ಮಾನಿಸಿ ಮನವಿ ಸಲ್ಲಿಸಿದರು   

ನರಗುಂದ: ‘ಬಸ್ ನಿಲ್ದಾಣದ ಹತ್ತಿರವಿರುವ ಮೇಲು ಸೇತುವೆಗೆ ಜಾಹಿರಾತು ಅಂಟಿಸಲು ಸಾರ್ವಜನಿಕರು ಪುರಸಭೆ ಅನುಮತಿ ಪಡೆಯಬೇಕು. ವಾರಕ್ಕೆ ₹5 ಸಾವಿರ ತೆರಿಗೆ ಕಟ್ಟಿದರೆ ಮಾತ್ರ ಬ್ಯಾನರ್ ಕಟ್ಟಲು ಅವಕಾಶ ನೀಡಬೇಕೆಂದು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ’ ಎಂದು ಶಾಸಕ ಸಿ.ಸಿ ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘2025-26ನೇ ಸಾಲಿನ 15ನೇ ಹಣಕಾಸು ಮುಕ್ತ ಅನುದಾನದಲ್ಲಿ ₹87.20 ಲಕ್ಷ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ನಿರ್ಬಂಧಿತ ಅನುದಾನದಲ್ಲಿ ₹130.80 ಲಕ್ಷ ನೀರು ನಿರ್ವಹಣೆಗೆ, ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಅನುದಾನ ಬಂದಿದೆ. ಅದನ್ನು ನಗರದ ಯಾವ ಭಾಗದಲ್ಲಿ ಕಾಮಗಾರಿ ಬಾಕಿ ಇದೆಯೋ ಅಲ್ಲಿ ಬಳಸಿಕೊಳ್ಳಬೇಕು. ಅಭಿವೃದ್ಧಿಗೆ ನೀಡುವ ಅನುದಾನವನ್ನು ಸರ್ಕಾರ ಕಡಿತ ಮಾಡುತ್ತಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ’ ಎಂದರು.

‘ನಗರದಲ್ಲಿ ಕುಡಿಯುವ ನೀರು ಸರಬರಾಜು ಸರಿಯಾಗಲು ವಾಟರ್ ಲೈನಮನ್‌ಗಳ ಕಾರ್ಯಚಟುವಟಿಕೆ ಚುರುಕಾಗಬೇಕು. ಮೇನ್ ಲೈನ್‌ಗಳಿಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇದ್ದರೆ ಕಡಿತ ಮಾಡಬೇಕು. ನಗರದಲ್ಲಿ ಪ್ರತಿ ನಲಗಳಿಗೂ ಮೀಟರ್‌ ಕಡ್ಡಾಯಗೊಳಿಸಬೇಕು. ಜತೆಗೆ ವಾರಕ್ಕೆ ಎರಡೂ ಬಾರಿ ಸದಸ್ಯರುಗಳು ತಮ್ಮ ವಾರ್ಡ್‌ಗಳನ್ನು ಪರಿಶೀಲಿಸಬೇಕು’ ಎಂದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಮಾತನಾಡಿ, ‘2025-26ನೇ ಸಾಲಿನ ಎಸ್.ಎಫ್.ಸಿ ಅನುದಾನದ ₹11 ಲಕ್ಷ ಬಂದಿದೆ. ಅದನ್ನು ಅಭಿವೃದ್ಧಿಗೆ ಬಳಸಲಾಗುವುದು’ ಎಂದರು.

ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಪುರಸಭೆ ನಿವೇಶನವಿದ್ದಲ್ಲಿ ಒದಗಿಸುವುದು. ಸವದತ್ತಿ ರಸ್ತೆಯಲ್ಲಿ ಬೈಕ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ನಿರ್ವಹಣೆಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸುವ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ರಾಚನಗೌಡ ಪಾಟೀಲ, ಪ್ರಶಾಂತ ಜೋಶಿ, ಪ್ರಕಾಶ ಹಾದಿಮನಿ, ದೇವಣ್ಣ ಕಲಾಲ, ಯಲ್ಲಪ್ಪಗೌಡ ನಾಯ್ಕರ, ರಾಜೇಶ್ವರಿ ಹವಾಲ್ದಾರ್‌, ದಿವಾನಸಾಬ್‌ ಕಿಲೇದಾರ, ರಾಜು ಮುಳಿಕ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪೌರನೌಕರರ ಸಂಘದ ಅಧ್ಯಕ್ಷ ಬಸವರಾಜ ಚಲವಾದಿ ಇದ್ದರು.

ಮುಷ್ಕರ ವಾಪಸ್:

ಪೌರನೌಕರರು ವಿವಿಧ ಬೇಡಿಕೆಗಳಿಗಾಗಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರ ವಾಪಸ್ ಪಡೆದರು. ಸರ್ಕಾರ ಬೇಡಿಕೆ ಈಡೇರಿಸಲು ಒಪ್ಪಿಗೆ ನೀಡಿದ ಪರಿಣಾಮ ನೌಕರರು ಶಾಸಕರಿಗೆ ಸಭೆಯಲ್ಲಿ ಸನ್ಮಾನಿಸಿ ಧನ್ಯವಾದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.