ADVERTISEMENT

ಜಾತ್ರೆಯಲ್ಲಿ ಕೃಷಿ ಮಾಹಿತಿ ವಿನಿಮಯ

ಗಮನ ಸೆಳೆದ ಪ್ರಾತ್ಯಕ್ಷಿಕೆಗಳು; ರೈತರಿಗೆ ಭರಪೂರ ಮಾಹಿತಿ ಒದಗಿಸಿದ ತಜ್ಞರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:48 IST
Last Updated 29 ಜನವರಿ 2026, 8:48 IST
ಗದಗ ತಾಲ್ಲೂಕಿನ ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಮೇಳವನ್ನು ಕುತೂಹಲದಿಂದ ವೀಕ್ಷಿಸಿದ ಮಠಾಧೀಶರು. ಮಾಜಿ ಶಾಸಕ ಡಿ.ಆರ್‌.ಪಾಟೀಲ ಇದ್ದರು
ಗದಗ ತಾಲ್ಲೂಕಿನ ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಮೇಳವನ್ನು ಕುತೂಹಲದಿಂದ ವೀಕ್ಷಿಸಿದ ಮಠಾಧೀಶರು. ಮಾಜಿ ಶಾಸಕ ಡಿ.ಆರ್‌.ಪಾಟೀಲ ಇದ್ದರು   

ಗದಗ: ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಅಂಗವಾಗಿ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಮೇಳ ಆಯೋಜಿಸಲಾಗಿತ್ತು.

ಇದು ಕೃಷಿ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳು, ತಂತ್ರಜ್ಞಾನಗಳ ಬಳಕೆ ಕುರಿತಾಗಿ ರೈತರಿಗೆ ಮಾಹಿತಿ ಒದಗಿಸಿತು. ಪ್ರಮುಖವಾಗಿ ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸುವ ವಿವಿಧ ಖಾದ್ಯಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. 

ಇತ್ತಿಚಿನ ದಿನಗಳಲ್ಲಿ ರೈತರು ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿಯತ್ತ ವಾಲುತ್ತಿದ್ದು, ಈ ಕುರಿತಾಗಿ ಮೇಳದಲ್ಲಿ ನಡೆದ ಪ್ರಾತ್ಯಕ್ಷಿಕೆ ರೈತರ ಗಮನ ಸೆಳೆಯಿತು.

ADVERTISEMENT

ಬೆಳೆಗಳಿಗೆ ತಗುಲುವ ಕೀಟಬಾಧೆ ನಿವಾರಣೆ ಹೇಗೆ? ಗಿಡಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಬೀಜಾಮೃತ, ಜೀವಾಮೃತ, ಪಂಚಗವ್ಯ ಹೇಗೆ ನೆರವಾಗುತ್ತದೆ? ಮಣ್ಣಿನ ಆರೋಗ್ಯ ರಕ್ಷಣೆ ಹೇಗೆ? ಇಂತಹ ಹತ್ತು ಹಲವು ಮಾಹಿತಿಯನ್ನು ತಜ್ಞರು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಿಳಿಸಿಕೊಟ್ಟರು.

ಕೃಷಿ ಕೆಲಸ-ಕಾರ್ಯಗಳಿಗೆ ಕೂಲಿಕಾರರ ಸಮಸ್ಯೆ ಎದುರಾಗಿದ್ದು, ಅದನ್ನು ತಂತ್ರಜ್ಞಾನ ಅಳವಡಿಕೆ ಮೂಲಕ ಬಗೆಹರಿಸಬಹುದು ಎಂಬುದಕ್ಕೆ ಯಂತ್ರಗಳ ಪ್ರದರ್ಶನ ಮೇಳ ಉತ್ತರ ನೀಡಿತು.

ಮಳೆನೀರು ಸಂಗ್ರಹ ವಿಧಾನ, ಮಿನಿ ಟ್ರ್ಯಾಕ್ಟರ್, ಕಳೆ ತೆಗೆಯುವ ಸಾಧನ, ಹಾಲು ಕರೆಯುವ ಯಂತ್ರ, ತೇವಾಂಶ ಕಾಪಾಡುವ ಎಡೆಹೊಡೆಯುವ ಕುಂಟೆ, ಕಾಳು ಸ್ವಚ್ಛಗೊಳಿಸುವ, ಈರುಳ್ಳಿ ಕತ್ತರಿಸುವ ಯಂತ್ರ, ವಿವಿಧ ಔಷಧಗಳನ್ನು ಸಿಂಪಡೆ ಮಾಡುವ ಯಂತ್ರ, ಗಾತ್ರಕ್ಕೆ ತಕ್ಕಂತೆ ವಿಂಗಡಿಸುವ ಯಂತ್ರಗಳು ಗಮನ ಸೆಳೆದವು.

‘ಕಪ್ಪು ಮಣ್ಣಿನಲ್ಲಿ ರೈತರು ಹೇಗೆ ಹೆಚ್ಚಿನ ಆದಾಯ ಪಡೆಯಬಹುದು ಹಾಗೂ ಬರಗಾಲದ ಬವಣೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಕುರಿತಾಗಿ ನಿರಂತರ ಸಂಶೋಧನೆ ನಡೆಯುತ್ತಿದೆ. ಅದರಲ್ಲಿ ಉತ್ತಮವೆಂದು ಕಂಡುಬರುವ ಪರಿಣಾಮಗಳನ್ನು ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಡಲಾಗುತ್ತಿದೆ’ ಎಂದು ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.