
ಮುಂಡರಗಿ: ‘ಕೃಷಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಆಧಾರಸ್ತಂಭ. ಕಾರಣಾಂತರಗಳಿಂದ ಕೃಷಿ ಕ್ಷೇತ್ರವು ಸದ್ಯ ಹಿನ್ನಡೆ ಅನುಭವಿಸುತ್ತಿದ್ದು, ಮುಂದೊಂದು ದಿನ ಕೃಷಿಗೆ ತುಂಬಾ ಬೇಡಿಕೆ ಬರಲಿದೆ’ ಎಂದು ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದ 286ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ ಸಿರಿಧಾನ್ಯ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಧಿಕ ಫಸಲು ಪಡೆಯುವ ಭರಾಟೆಯಲ್ಲಿ ಬಹುತೇಕ ರೈತರು ಅತಿಯಾಗಿ ರಸಾಯನಿಕ ಗೊಬ್ಬರ ಬಳಸುತ್ತಿದ್ದು, ಅದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಜೊತೆಗೆ ರಸಾಯನಿಕ ಬಳಸಿ ಬೆಳೆದ ಆಹಾರ ಪದಾರ್ಥಗಳ ಮೂಲಕ ವಿಷಯುಕ್ತ ರಸಾಯನಿಕಗಳು ನಮ್ಮ ದೇಹವನ್ನು ಸೇರಿ, ನಮ್ಮ ಆರೋಗ್ಯ ಹಾಳು ಮಾಡುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಎಸ್.ಬಿ.ರಾಮನೇಹಳ್ಳಿ ಮಾತನಾಡಿ, ‘ಕೃಷಿಕರು ಸಾವಯುವ ಮತ್ತು ಸಹಜ ಕೃಷಿಗೆ ಆದ್ಯತೆ ನೀಡುವ ಮೂಲಕ ಸಾವಯುವ ಗ್ರಾಮ ಪರಿಕ್ಪಲನೆಗೆ ಒತ್ತು ನೀಡಬೇಕು. ಆ ಮೂಲಕ ಭೂಮಿ ಹಾಗೂ ಜನರ ಆರೋಗ್ಯವನ್ನು ಕಾಪಾಡಬೇಕು’ ಎಂದು ತಿಳಿಸಿದರು.
ಸಜ್ಜಿ, ನವಣೆ, ಜೋಳ, ರಾಗಿ ಮೊದಲಾದ ಸಿರಿ ಧಾನ್ಯಗಳು, ಉಪಯುಕ್ತ ಕೃಷಿ ಪರಿಕರಗಳು ವಸ್ತು ಪ್ರದರ್ಶನದಲ್ಲಿ ರೈತರ ಗಮನ ಸೆಳೆದವು. ಕೃಷಿಕ್ಷೇತ್ರಕ್ಕೆ ಪೂರಕವಾದ ವಿವಿಧ ಆಧುನಿಕ ಕೃಷಿ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಗೌರಿಶಂಕರ ಸಜ್ಜನರ, ಅಕ್ಕಮಹಾದೇವಿ ಶಲವಡಿ, ಲಕ್ಷ್ಮಿ ರಾಘಣ್ಣವರ, ಎನ್.ಬಿ.ಹೊಸಳ್ಳಿ, ನಾಗರಾಜ ಭೋವಿ, ಮಾರುತಿ ರಾಠೋಡ, ದಾವಲಸಾಬ ಸೂರಟೂರ ಇದ್ದರು.
ಕೃಷಿ ದೇಶದ ಮೂಲ ಉದ್ಯೋಗ ಯುವಕರು ಕೃಷಿಕ್ಷೇತ್ರದತ್ತ ಮುಖ ಮಾಡಬೇಕು. ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಹೋಗಬೇಕು.ತೋಂಟದ ಸಿದ್ಧರಾಮ ಸ್ವಾಮೀಜಿ, ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.