ADVERTISEMENT

ಗದಗ | ಎಣ್ಣೆಕಾಳು ಬೆಳೆಯಲು ಸರ್ಕಾರದಿಂದ ಪ್ರೋತ್ಸಾಹ: ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 4:41 IST
Last Updated 6 ಜುಲೈ 2025, 4:41 IST
ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸೂರ್ಯಕಾಂತಿ ಬೀಜದ ಪ್ಯಾಕೆಟ್‌ ವಿತರಣೆ ಮಾಡಲಾಯಿತು
ಗದಗ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸೂರ್ಯಕಾಂತಿ ಬೀಜದ ಪ್ಯಾಕೆಟ್‌ ವಿತರಣೆ ಮಾಡಲಾಯಿತು   

ಗದಗ: ‘ಉತ್ತರ ಕರ್ನಾಟಕದ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಪ್ರಸ್ತುತ ಮಳೆ ಕೊರತೆ ಆವರಿಸಿರುವುದರಿಂದ ಮುಂಗಾರು ಬೆಳೆಗಳು ಒಣಗುತ್ತಿವೆ. ರೈತರು ಹತಾಶೆಗೆ ಒಳಗಾಗದೇ ಕೃಷಿ ಚಟುವಟಿಕೆ ಮುಂದುವರಿಸಬೇಕು’ ಎಂದು ಗದಗ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಹೇಳಿದರು.

ಇಲ್ಲಿಗೆ ಸಮೀಪದ ತಿಮ್ಮಾಪುರ ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಕೆಬಿಎಸ್‌ಎಚ್- 78 ತಳಿಯ ಸೂರ್ಯಕಾಂತಿ ಬೀಜದ ಪ್ಯಾಕೆಟ್‌ ವಿತರಣೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾಡಿದರು.

‘ದೇಶದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯುವ ರೈತರ ಪ್ರಮಾಣ ಕಡಿಮೆಯಾಗಿದೆ. ನಮಗೆ ಅಗತ್ಯ ಇರುವಷ್ಟು ಬೆಳೆ ಬರುತ್ತಿಲ್ಲ. ಅದಕ್ಕೆ ಬೇರೆ ದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಕಾರಣ, ಈ ಕೊರತೆ ನೀಗಿಸಲು ಸರ್ಕಾರ ಎಣ್ಣೆಕಾಳುಗಳ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಅದರಂತೆ ರೈತರಿಗೆ ಕೃಷಿ ಇಲಾಖೆಯಿಂದ ಉಚಿತವಾಗಿ ಸೂರ್ಯಕಾಂತಿ ಬೀಜಗಳನ್ನು ವಿತರಿಸಲಾಗಿದೆ’ ಎಂದರು.

ADVERTISEMENT

‘ರೈತರು ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮಣ್ಣು ಮತ್ತು ನೀರು ಸಂರಕ್ಷಣೆ, ತೇವಾಂಶ ನಿರ್ವಹಣೆ, ಹಸಿರುಎಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಬೇಕು. ರಾಸಾಯನಿಕ ಕಾಳು ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ದ್ರವರೂಪದ ಗೊಬ್ಬರಗಳಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಗೊಬ್ಬರ ಬಳಕೆ ಮಾಡಬೇಕು’ ಎಂದರು.

ಅದೇರೀತಿ ಕೃಷಿ ಇಲಾಖೆಯ ಅಟಲ್ ಭೂಜಲ ಯೋಜನೆಯಲ್ಲಿ ಕೃಷಿ ಹೊಂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕು. ನೀರಾವರಿ ಸೌಲಭ್ಯ ಪಡೆಯಲು ಸ್ಪಿಂಕ್ಲರ್ ಪೈಪ್, ಎಂಜಿನ್ ಹಾಗೂ ಬಿತ್ತನೆಗೆ ಕೂರಗಿ, ಕುಂಟೆ, ರಾಶಿ ಮಾಡುವ ಯಂತ್ರಗಳನ್ನು ಹಾಗೂ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಗದಗ ಬೆಟಗೇರಿ ರೈತ ಸಂಪರ್ಕ ಕೇಂದ್ರದ ಬಸವರಾಜೇಶ್ವರಿ ಸಜ್ಜನರ, ಸಹಾಯಕ ಕೃಷಿ ಅಧಿಕಾರಿ ರಮೇಶ ಜತ್ತಿ, ಕೃಷ್ಣಾರೆಡ್ಡಿ ಮೇಟಿ, ಸುಶ್ಮಿತಾ ಹಾಗೂ ರೈತ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಮಲ್ಲಿಕಾರ್ಜುಜ ಇದ್ಲಿ, ಭೀಮಪ್ಪ ರಾಮ್‌ಜಿ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.