ADVERTISEMENT

ಅಕ್ಷಯ ತೃತೀಯಾ;ಚಿನ್ನ ಖರೀದಿ ಸಂಭ್ರಮ

ಸಂಪ್ರದಾಯ ಪಾಲನೆ; ಚಿನ್ನಾಭರಣ ಮಳಿಗೆಗಳಲ್ಲಿ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 9:30 IST
Last Updated 7 ಮೇ 2019, 9:30 IST
ಅಕ್ಷಯ ತೃತೀಯಾ ಅಂಗವಾಗಿ ಗದುಗಿನ ಸ್ಟೇಷನ್‌ ರಸ್ತೆಯಲ್ಲಿರುವ ಲೆಹರ್‌ ಚಿನ್ನಾಭರಣ ಮಳಿಗೆಯಲ್ಲಿ ಗ್ರಾಹಕರು ಮಂಗಳವಾರ ಆಭರಣ ಖರೀದಿಯಲ್ಲಿ ತೊಡಗಿದ್ದರು
ಅಕ್ಷಯ ತೃತೀಯಾ ಅಂಗವಾಗಿ ಗದುಗಿನ ಸ್ಟೇಷನ್‌ ರಸ್ತೆಯಲ್ಲಿರುವ ಲೆಹರ್‌ ಚಿನ್ನಾಭರಣ ಮಳಿಗೆಯಲ್ಲಿ ಗ್ರಾಹಕರು ಮಂಗಳವಾರ ಆಭರಣ ಖರೀದಿಯಲ್ಲಿ ತೊಡಗಿದ್ದರು   

ಗದಗ: ಚಿನ್ನ ಖರೀದಿಸಲು ಯೋಗ್ಯ ದಿನ ಎಂದೇ ನಂಬಲಾದ ಅಕ್ಷಯ ತೃತೀಯದಂದು ಮಂಗಳವಾರ ನಗರದಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂತು. ಅಕ್ಷಯ ತೃತೀಯದಂದು ಮನೆಗೆ ಚಿನ್ನ ತಂದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿ ಸಾಂಕೇತಿಕವಾಗಿ ಗುಲಗಂಜಿಯಷ್ಟಾದರೂ ಬಂಗಾರ ಖರೀದಿಸುವ ಉದ್ದೇಶದಿಂದ ಸಾಕಷ್ಟು ಜನರು ಮಳಿಗೆಗಳಿಗೆ ಮುಗಿಬಿದ್ದಿದ್ದರು.

ಜನರ ಸಾಂಪ್ರದಾಯಿಕ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಚಿನ್ನಾಭರಣ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಹಲವು ಕೊಡುಗೆಗಳನ್ನು ಪ್ರಕಟಿಸಿದ್ದರು. ಕೆಲವು ಮಳಿಗೆಗಳಲ್ಲಿ ಮುಂಗಡ ಬುಕ್ಕಿಂಗ್‌ ಮಾಡಿದ ಗ್ರಾಹಕರಿಗೆ ವೇಸ್ಟೇಜ್‌ ಮತ್ತು ಮೇಕಿಂಗ್‌ ಚಾರ್ಜ್‌ನಲ್ಲಿ ರಿಯಾಯ್ತಿ ನೀಡಲಾಗಿತ್ತು. ಮುಂಗಡವಾಗಿ ಕಾಯ್ದಿರಿಸಿದವರು ಮಂಗಳಾರ ಬೆಳಿಗ್ಗೆಯೇ ಅಂಗಡಿಗೆ ಬಂದು ಆಭರಣ ಖರೀದಿಸಿ, ಮನೆಗೆ ತಂದು ಪೂಜೆ ಸಲ್ಲಿಸಿದ ಬಳಿಕ ಅವುಗಳನ್ನು ಧರಿಸಿ, ಸಂಭ್ರಮಿಸಿದರು.

ನಗರದ ಸರಾಫ ಬಜಾರ್‌ನಲ್ಲಿ 150ಕ್ಕೂ ಹೆಚ್ಚು ಚಿನ್ನಾಭರಣ ವರ್ತಕರಿದ್ದಾರೆ. ‘ಗ್ರಾಮೀಣ ಭಾಗದ ಜನರೇ ನಮ್ಮ ಪ್ರಮುಖ ಗ್ರಾಹಕರು. ಈಗ ಮದುವೆ ಸೀಸನ್‌ ಆರಂಭವಾಗಿರುವುದರಿಂದ, ಹೆಚ್ಚಿನ ಗ್ರಾಹಕರು ಮುಂಗಡವಾಗಿ ಹಣ ನೀಡಿ ಕಾಯ್ದಿರಿಸಿದ್ದಾರೆ. ಅಕ್ಷಯ ತೃತೀಯ ದಿನ ಚಿನ್ನವನ್ನು ಮನೆಗೆ ಕೊಂಡೊಯ್ಯುತ್ತಾರೆ’ ಎಂದು ವರ್ತಕರು ಹೇಳಿದರು.

ADVERTISEMENT

‘ನಗರ ಪ್ರದೇಶದ ಗ್ರಾಹಕರು ವಿಶೇಷವಾಗಿ ಉದ್ಯೋಗಿಗಳು ಹುಬ್ಬಳ್ಳಿಗೆ ಹೋಗಿ ಮಲಬಾರ್‌, ಕಲ್ಯಾಣ್‌ನಂತಹ ದೊಡ್ಡ ಮಳಿಗೆಗಳಿಂದ ಚಿನ್ನ ಖರೀದಿಸುತ್ತಾರೆ. ಗದಗ ಮಾರುಕಟ್ಟೆಯಲ್ಲಿ ಬೃಹತ್‌ ಮೊತ್ತದ ಖರೀದಿ ವಹಿವಾಟು ನಡೆಯುವುದಿಲ್ಲ. ಕೆಲವರು ಸಂಪ್ರದಾಯ ಪಾಲನೆಗೆ ಚಿನ್ನದ ನಾಣ್ಯಗಳನ್ನು ಖರೀದಿಸುತ್ತಾರೆ ಎಂದು ಕೆಲವು ವ್ಯಾಪಾರಿಗಳು ಚಿನಿವಾರಪೇಟೆಯ ಚಿತ್ರಣ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.