ADVERTISEMENT

ಮುಷ್ಕರ: ಕಾರ್ಮಿಕರ ಕಲ್ಯಾಣಕ್ಕೆ ₹1 ಸಾವಿರ ಕೋಟಿ ಮೀಸಲಿಡಲು ಆಗ್ರಹ

ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ: ಮಹೇಶ ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:34 IST
Last Updated 13 ಫೆಬ್ರುವರಿ 2026, 5:34 IST
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಗದಗ ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಮುಷ್ಕರ ನಡೆಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಗದಗ ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಮುಷ್ಕರ ನಡೆಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು   

ಗದಗ: ‘ಹಮಾಲಿ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಭವಿಷ್ಯನಿಧಿ ಪಿಂಚಣಿ, ಸಹಜ ಮರಣ ಪರಿಹಾರ ಸೇರಿದಂತೆ ಸಮಗ್ರ ಕಲ್ಯಾಣ ಸೌಲಭ್ಯಗಳನ್ನು ಜಾರಿ ಮಾಡಬೇಕು. ಇದಕ್ಕಾಗಿ ಪ್ರಸ್ತುತ ಬಜೆಟ್‍ನಲ್ಲಿ ₹1,000 ಕೋಟಿ ಮೀಸಲಿಡಬೇಕು’ ಎಂದು ಗದಗ ಸಿಐಟಿಯು ಅಧ್ಯಕ್ಷ ಮಹೇಶ ಹಿರೇಮಠ ಆಗ್ರಹಿಸಿದರು.

ಹಮಾಲಿ ಕಾರ್ಮಿಕರು ಸೇರಿದಂತೆ ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿ ಗದಗ ವತಿಯಿಂದ ಒಂದು ದಿನದ ಮುಷ್ಕರ ನಡೆಸಿ, ಗದಗ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘ಕಲ್ಯಾಣ ಯೋಜನೆಗಳ ಕಲ್ಪನೆ ದುರ್ಬಲಗೊಳಿಸಿ ದೇಶದ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ಕೇಂದ್ರ ಸರ್ಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ವಾಪಸ್‌ ಪಡೆಯಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಅಸಂಘಟಿತ ವಲಯದ ಶ್ರಮಜೀವಿಗಳಾದ ಗ್ರಾಮೀಣ, ನಗರ ಹಮಾಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ವಸತಿ, ಸಾಮಾಜಿಕ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡೆ ಯಶೋದಾ ಬೆಟಗೇರಿ ಮಾತನಾಡಿ, ‘ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಲು ರಾಜ್ಯದ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ, ಶೌಚಾಲಯ ನಿರ್ಮಾಣ ಮತ್ತು ಕನಿಷ್ಠಿ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ಬಸವರಾಜ ಮಂತೂರ, ರುದ್ರಪ್ಪ ಕಂದಗಲ್ಲ, ಸಾವಿತ್ರಿ ಸಬ್ನಿಸ್, ಶಾರದಾ ರೋಣದ, ಪೀರು ರಾಠೋಡ, ಮುತ್ತಪ್ಪ ಚಲವಾದಿ, ನಿಂಗಪ್ಪ ಸರಸೂರ, ಬಸವರಾಜ, ಸಂತೋಷ ಕುಂಬಾರ, ಹಾಲಪ್ಪ ಬಂಡಿವಡ್ಡರ, ತಾಂಬ್ರಗುಂಡಿ, ರುದ್ರಗೌಡ ಸಂಕನಗೌಡ್ರ ಇದ್ದರು.

ಕನಿಷ್ಠ ವೇತನ

ವೈಜ್ಞಾನಿಕವಾಗಿ ಮರು ಪರಿಷ್ಕರಣೆಯಾಗಬೇಕು. ಹಮಾಲಿ ಕಾರ್ಮಿಕರಿಗೆ ಕೇಂದ್ರ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಸೂಕ್ತವಾದ ಗುಂಪು ವಸತಿ ಯೋಜನೆಗಳನ್ನು ರೂಪಿಸಬೇಕು ಮಾರುತಿ ಚಿಟಗಿ ಕಾರ್ಮಿಕ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.