ADVERTISEMENT

ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ಸಂತಸ

ಮಾದಿಗ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಮೋಹನ್ ಅಲಮೇಲ್ಕರ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:40 IST
Last Updated 1 ಮಾರ್ಚ್ 2026, 3:40 IST
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿ ಸಭೆ ಶನಿವಾರ ಜರುಗಿತು 
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿ ಸಭೆ ಶನಿವಾರ ಜರುಗಿತು    

ಮುಂಡರಗಿ: ‘ತಾಲ್ಲೂಕಿನ ಡಂಬಳ ಗ್ರಾಮ ಭಾವೈಕ್ಯತೆ ಕೋಮಸೌಹಾರ್ದದ ನೆಲೆಯಾಗಿದ್ದು, ಗದುಗಿನ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಆಶಯದಂತೆ ಗ್ರಾಮದಲ್ಲಿ ಅಂಬೇಡ್ಕರ ಮೂರ್ತಿ ಅನಾವರಣಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದು ಮಾದಿಗ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಮೋಹನ್ ಅಲಮೇಲ್ಕರ್ ಹರ್ಷವ್ಯಕ್ತಪಡಿಸಿದರು.

ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ಆವರಣದಲ್ಲಿ ಮಾರ್ಚ್‌ 7ರಂದು 6.8 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್‌ ಮೂರ್ತಿ ಅನಾವರಣಗೊಳ್ಳಲಿದೆ’ ಎಂದು ತಿಳಿಸಿದರು.

‘ಜನಪರ ಕಾರ್ಯಕ್ರಮಗಳ ಮೂಲಕ ಗದುಗಿನ ಲಿಂ.ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ತತ್ವಸಿದ್ದಾಂತ ಹಾಗೂ ವಿಚಾರಗಳು ಇನ್ನೂ ಜೀವಂತವಾಗಿದ್ದು, ಅವರು ನಾಡಿನ ಪ್ರತಿಯೊಬ್ಬ ಪ್ರಜೆಗೂ ಪ್ರೇರಣಾ ಶಕ್ತಿಯಾಗಿದ್ದಾರೆ. ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ತಾಲ್ಲೂಕು ಹಾಗೂ ಜಿಲ್ಲೆಯ ಎಲ್ಲ ಸಮುದಾಯದ ಹಿರಿಯರು ಪಾಲ್ಗೊಳ್ಳಬೇಕು’ ಎಂದು ವಿನಂತಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಸಂಚಾಲಕ ಎಚ್.ಡಿ. ಪೂಜಾರ ಮಾತನಾಡಿ, ‘ಇಡೀ ದೇಶಕ್ಕೆ ಅಂಬೇಡ್ಕರ್‌ ರಚಿಸಿರುವ ಸಂವಿಧಾನವೇ ಪವಿತ್ರ ಗ್ರಂಥವಾಗಿದ್ದು, ನಾವೆಲ್ಲರೂ ಅದರ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಮೂರ್ತಿ ಪ್ರತಿಷ್ಠಾಪನಾ ಸಮಿತಿ ಗೌರವಾಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ ಮಾತನಾಡಿ, ಅಂಬೇಡ್ಕರ್‌ ಅವರ ಸೇವೆ ಪವಿತ್ರ ಕಾರ್ಯವಾಗಿದ್ದು, ಅವರು ರಚಿಸಿದ ಸಂವಿಧಾನದಿಂದ ದೇಶದ ಜನರು ಗೌರವದಿಂದ ಬದುಕುತ್ತಿದ್ದಾರೆ. ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಡಿಎಸ್‌ಎಸ್ ಬೆಳಗಾವಿ ವಿಭಾಗೀಯ ಸಂಚಾಲಕ ಸತೀಶ ಪಾಸಿ, ಬಾಲರಾಜ್ ಅರಬರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಹಿಳಾ ಸಂಚಾಲಕಿ ಸುಶೀಲಾ ಚಲವಾದಿ, ಮರಿಯಪ್ಪ ಸಿದ್ದಣ್ಣವರ, ಮರಿತೆಮ್ಮಪ್ಪ ಆದಮ್ಮನವರ, ನಾಗಪ್ಪ ತಳವಾರ, ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಮಲ್ಲಿಕಾರ್ಜುನ ಗೌಡಣ್ಣವರ, ಲಕ್ಷ್ಮಣ ದೊಡ್ಡಮನಿ, ಡಿ.ಜಿ.ಪೂಜಾರ, ಲಕ್ಷ್ಮಣ ದೊಡ್ಡಮನಿ, ಅಶೋಕ ತಳಗೇರಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.