
ಶಿರಹಟ್ಟಿ: ‘ಕಾಯಕ ನಿಷ್ಠೆ ತತ್ವ ಸಾರಿದ ನಿಜಶರಣ ಅಂಬಿಗರ ಚೌಡಯ್ಯನವರು ಜನರ ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕು ತೋರಿಸಿದ ಮಹಾನ್ ಚೇತನ’ ಎಂದು ತಹಶೀಲ್ದಾರ್
ಕೆ.ರಾಘವೇಂದ್ರ ರಾವ್ ಅವರು ಹೇಳಿದರು.
ತಾಲ್ಲೂಕು ಗಂಗಾಮತ ಸಮಾಜ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಅಂಬಿಗರ ಚೌಡಯ್ಯನವರ ಜಯಂತಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಬಿಗರ ಚೌಡಯ್ಯನವರು ವೃತ್ತಿಯಲ್ಲಿ ಅಂಬಿಗನಾಗಿದ್ದರೂ ವಚನ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ವ್ಯಕ್ತಿ’ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ‘ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಗಮನಿಸಿದರೆ ಅವರೊಬ್ಬ ಕೆಚ್ಚೆದೆಯ ನಿಷ್ಠುರ ವಚನಕಾರರು ಎಂದು ತಿಳಿಯುತ್ತದೆ. ತಮ್ಮ ವಚನ ಸಾಹಿತ್ಯ ಮೂಲಕ ಕಾಯಕವನ್ನು ಎತ್ತಿ ಹಿಡಿದಿದ್ದರು’ ಎಂದರು.
ಸ್ಥಳೀಯ ಮೇಗೇರಿ ಓಣಿಯಿಂದ ಪ್ರಾರಂಭವಾದ ಮೆರವಣಿಗೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಚಾಲನೆ ನೀಡಿದರು. ಸಕಲ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಶೀಲ್ದಾರ್ ಕಚೇರಿ ತಲುಪಿತು.
ಈ ವೇಳೆ ಹುಮಾಯೂನ್ ಮಾಗಡಿ, ಎಚ್.ಎಂ. ದೇವಗಿರಿ, ಅಶೋಕ ಹುಬ್ಬಳ್ಳಿ, ಮಂಜುನಾಥ ಹುಬ್ಬಳ್ಳಿ, ಪ್ರವೀಣ ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಶಂಕ್ರಪ್ಪ ಬಾರಕಿ, ಪ್ರಕಾಶ್ ಸುಣಗಾರ, ಶಿವಾನಂದ ಬಾರಕೇರ, ಹೊನ್ನಪ್ಪ ಶಿರಹಟ್ಟಿ, ಆನಂದ ಕೋಳಿ, ಚಂದ್ರು ಹುಬ್ಬಳ್ಳಿ, ಶಪ್ಪಿ ಹೆಸರೂರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.