ADVERTISEMENT

ಗದಗ: ಆಶಾ ಕಾರ್ಯಕರ್ತೆಯರಿಂದ ಮೂರು ದಿನ ಅಹೋರಾತ್ರಿ ಧರಣಿ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:23 IST
Last Updated 1 ಆಗಸ್ಟ್ 2025, 4:23 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು – ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು – ಪ್ರಜಾವಾಣಿ ಚಿತ್ರ   

ಗದಗ: ‘ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್‌ 12ರಿಂದ 14ರವರೆಗೆ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿಯೇ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ, ತರಬೇತಿ ನಂತರವೂ ವಿದ್ಯಾರ್ಹತೆಯ ಮಾನದಂಡ ಹೇರಿ ಕೆಲಸದಿಂದ ವಜಾಗೊಳಿಸುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಹಾಗೂ ವೇತನ ಹೆಚ್ಚಳ ಮಾಡಲು ಸರ್ಕಾರ ತಕ್ಷಣವೇ ಕ್ರಮವಹಿಸುವಂತೆ ಆಗ್ರಹಿಸಿ ಮೂರು ದಿನ ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನಗರದ ಗಾಂಧಿ ಸರ್ಕಲ್‌ನಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುವರು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಆಶಾ ಮೊದಲ ಕರೆ ಕೇಂದ್ರವಾಗಿದೆ. ಕೋವಿಡ್‌ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮೊದಲ ಸಾಲಿನ ಯೋಧರಂತೆ ಕೆಲಸ ನಿರ್ವಹಿಸಿದ್ದಾರೆ. ಕಳೆದ 17 ವರ್ಷಗಳಿಂದ ತಳ ಹಂತದಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರ ಗೋಳು ಯಾರಿಗೂ ಬೇಡವಾಗಿದೆ. ಆಳುವ ಸರ್ಕಾರ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.

ADVERTISEMENT

ಗದಗ ಜಿಲ್ಲಾ ಗೌರವಾಧ್ಯಕ್ಷ ಸುರೇಶ್ ಜಿ., ಭಾಗ್ಯಜ್ಯೋತಿ, ಲಕ್ಷ್ಮೀ ಪೂಜಾರ, ಗೌರಮ್ಮ ಕಟ್ಟಿಮನಿ, ಪ್ರೇಮಾ ಪಾಟೀಲ, ರಮಿಜಾ ಹಾವೇರಿ, ಸುಮಂಗಲಾ ತಳವಾರ, ಮಂಜುಳಾ ಹೊಸೂರ, ಅನ್ನಪೂರ್ಣ ಖಾಟವಾ, ಗೀತಾ ಭಜಂತ್ರಿ, ಶಾಹಿನ್ ಅಲ್ಮಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.