ADVERTISEMENT

ಆಶ್ರಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ?

ಪುರಸಭೆ ವತಿಯಿಂದ ಹಂಚಿಕೆ; ಕಟ್ಟದೆ ಇರುವ ಮನೆಗಳಿಗೂ ಅನುದಾನ ಬಿಡುಗಡೆ

ನಾಗರಾಜ ಎಸ್‌.ಹಣಗಿ
Published 4 ಅಕ್ಟೋಬರ್ 2018, 19:46 IST
Last Updated 4 ಅಕ್ಟೋಬರ್ 2018, 19:46 IST

ಲಕ್ಷ್ಮೇಶ್ವರ: ಪುರಸಭೆಯಿಂದ ನಡೆದ ನಡೆದ ಆಶ್ರಯ ಮನೆಗಳ ನಿವೇಶನ ಹಂಚಿಕೆಯಲ್ಲಿ ಅಂದಾಜು ₹2.50 ಕೋಟಿ ಮೊತ್ತದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪುರಸಭೆ ಮಾಜಿ ಸದಸ್ಯ ಗಣೇಶ ಬೇವಿನಮರದ ಅವರು ಈ ಕುರಿತು ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಶ್ರಯ ಯೋಜನೆಯಡಿ 2016-17 ಮತ್ತು 2017-18ನೇ ಸಾಲಿನಲ್ಲಿ 850 ಮನೆಗಳನ್ನು ವಸತಿರಹಿತ ಬಡವರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, ಎಸ್‍ಸಿ ಮತ್ತು ಎಸ್‍ಟಿ ಫಲಾನುಭವಿಗಳಿಗೆ ಸೇರಬೇಕಾಗಿದ್ದ 148 ಮನೆಗಳನ್ನು ಇತರೆ ವರ್ಗದವರಿಗೆ ಹಂಚಿಕೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಂದೇ ಮನೆ ಹೆಸರಿನಲ್ಲಿ ಎರಡು, ಮೂರು ಬಾರಿ ಅನುದಾನ ಬಿಡುಗಡೆಮಾಡಿ ಅದನ್ನು ಅಧಿಕಾರಿಗಳು ತಮ್ಮ ಜೇಬಿಗಿಳಿಸಿದ್ದಾರೆ.

ಆಶ್ರಯ ಮನೆ ಯೋಜನೆಯಡಿ ಹಂಚಿಕೆಯಾದ 14 ಮನೆಗಳಿಗೆ 2 ಬಾರಿ ಅನುದಾನ ಬಿಡುಗಡೆ ಮಾಡಲಾಗಿದೆ. 44 ನಿವೇಶನದಾರರು ಮನೆಗಳನ್ನು ಕಟ್ಟದೇ ಇದ್ದರೂ,ಅವರ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿರುವ ಅಧಿಕಾರಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. 13 ಹಳೆಯ ಮನೆಗಳನ್ನೇ ಹೊಸದಾಗಿ ನಿರ್ಮಿಸಲಾಗಿದೆ ಎಂದು ದಾಖಲೆಯಲ್ಲಿ ತೋರಿಸಿ ಪ್ರತಿ ಮನೆಗೆ ₹2.70 ಲಕ್ಷ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ.ತಮ್ಮ ‘ನೆಚ್ಚಿನ ಫಲಾನುಭವಿ’ಗಳಿಗೆ ಒಂದೇ ತಿಂಗಳಲ್ಲಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ.

ADVERTISEMENT

‘ಆಶ್ರಯ ಮನೆ ಅನುದಾನ ದುರುಪಯೋಗ ಆಗಿರುವ ಕುರಿತು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೇನೆ. ಈಗಾಗಲೇ ಪುರಸಭೆ ಒಬ್ಬ ಗುಮಾಸ್ತನನ್ನು ಅಮಾನತು ಮಾಡಿದೆ.ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಉಳಿದ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದು ಗಣೇಶ ಬೇವಿನಮರದ ಹೇಳಿದರು.

‘ಮಧ್ಯವರ್ತಿಯೊಬ್ಬ ತನ್ನ ಪ್ರಭಾವದಿಂದ ಜಿ.ಎಸ್. ಗಡ್ಡದೇವರಮಠ ಆಶ್ರಯ ಕಾಲೋನಿಯಲ್ಲಿ 8 ನಿವೇಶನಗಳನ್ನು ಹೆಂಡತಿ, ತಂದೆ, ತಾಯಿ, ಅತ್ತೆ, ಅಣ್ಣ ತಮ್ಮಂದಿರ ಹೆಸರಲ್ಲಿ ಹೊಂದಿದ್ದ. ಆದರೆ ಆಶ್ರಯ ಹಗರಣ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆ ಆತ ಬೇರೆಯವರಿಗೆ ಈ ನಿವೇಶನಗಳನ್ನು ಮಾರಾಟ ಮಾಡಿದ್ದಾನೆ. ಒಂದು ಬಾರಿ ಹಂಚಿಕೆ ಆದ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ, ಈ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದ್ದಾನೆ’ ಎಂದರು.

ಜಿ.ಎಸ್. ಗಡ್ಡದೇವರಮಠ ನಗರ, ಕರೇಗೌರಿ ಪ್ಲಾಟ್, ರಂಭಾಪುರಿ ನಗರ ಆಶ್ರಯ ಕಾಲೋನಿಗಳಲ್ಲಿ 24 ನಿವೇಶನಗಳನ್ನು ಬೇರೆಯವರ ಹೆಸರಿಗೆ ಪರಭಾರೆ ಮಾಡಲಾಗಿದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.