ADVERTISEMENT

Asian Surfing Championships: ಮುರುಡಿ ತಾಂಡಾದ ಸರ್ಫಿಂಗ್ ಸಾಹಸಿ 'ರಮೇಶ'

ಕಾಶಿನಾಥ ಬಿಳಿಮಗ್ಗದ
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
ಚೆನ್ನೈನ ಸಮದ್ರ ತೀರದಲ್ಲಿ ಸರ್ಫಿಂಗ್ ಕ್ರೀಡೆಯಲ್ಲಿ ತೊಡಗಿರುವ ಮುಂಡರಗಿ ತಾಲ್ಲೂಕಿನ ಮುರುಡಿ ತಾಂಡಾದ ರಮೇಶ ಬೂದಿಹಾಳ (ಸಂಗ್ರಹ ಚಿತ್ರ)
ಚೆನ್ನೈನ ಸಮದ್ರ ತೀರದಲ್ಲಿ ಸರ್ಫಿಂಗ್ ಕ್ರೀಡೆಯಲ್ಲಿ ತೊಡಗಿರುವ ಮುಂಡರಗಿ ತಾಲ್ಲೂಕಿನ ಮುರುಡಿ ತಾಂಡಾದ ರಮೇಶ ಬೂದಿಹಾಳ (ಸಂಗ್ರಹ ಚಿತ್ರ)   

ಮುಂಡರಗಿ (ಗದಗ): ಉದ್ಯೋಗ ಅರಸಿ ಕೇರಳಕ್ಕೆ ತೆರಳಿದ್ದ ಮುಂಡರಗಿ ತಾಲ್ಲೂಕಿನ ಮುರುಡಿ ತಾಂಡಾದ ಯುವಕ ರಮೇಶ ಬೂದಿಹಾಳ ಅವರು ಭಾನುವಾರ ಚೆನೈನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿ ಚಾರಿತ್ರಿಕ ಸಾಧನೆ ಮೆರೆದಿದ್ದಾರೆ.

ಕುಗ್ರಾಮವಾದ ಮುರುಡಿ ತಾಂಡಾದ 25 ವರ್ಷದ ರಮೇಶ ಅವರು ದಶಕದ ಹಿಂದೆ ಕುಟುಂಬದ ಸದಸ್ಯರೊಂದಿಗೆ ಕೆಲಸ ಅರಸಿ ಕೇರಳಕ್ಕೆ ತೆರಳಿದ್ದರು. ಮೊದಲಿನಿಂದಲೂ ಜಲಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ರಮೇಶ ಅವರು ಅದರಲ್ಲಿಯೇ ಏನನ್ನಾದರೂ ಸಾಧಿಸುವ ಸಂಕಲ್ಪ ಹೊಂದಿದ್ದರು.

ಕೇರಳದ ತಿರುವನಂತಪುರಂ ಹತ್ತಿರದ ಕೋಳಂ ಬೀಚ್ ಬಳಿಯ ತಿರುವನಂತಪುರಂ ಬೀಚ್ ಕ್ಲಬ್ ಸೇರಿಕೊಂಡು, ಅಲ್ಲಿಂದ ತಮ್ಮ ಸರ್ಫಿಂಗ್ ಪಯಣ ಆರಂಭಿಸಿದರು. ಅಲ್ಲಿ ಸಾಕಷ್ಟು ತರಬೇತಿ ಪಡೆದುಕೊಂಡು ಕೇರಳ ರಾಜ್ಯದ ಪೆರಂಬೂರಿನಲ್ಲಿ ನಡೆದ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ನಂತರ ವರ್ಕಾಲಾದಲ್ಲಿ ನಡೆದ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ದೇಶದ ಗಮನ ಸೆಳೆದರು.

ADVERTISEMENT

ಶನಿವಾರ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್ ಪುರುಷರ ವಿಭಾಗದಲ್ಲಿ ರಮೇಶ ಅವರು 14.84 ಅಂಕಗಳನ್ನು ಗಳಿಸಿ ಫೈನಲ್ ಪ್ರವೇಶಿಸಿದ್ದರು. ಪದಕ ಸುತ್ತು ಪ್ರವೇಶಿಸಿದ ಭಾರತದ ಮೊದಲ ಸರ್ಫರ್‌ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

ಈ ಭಾಗದಲ್ಲಿ ಸರ್ಫಿಂಗ್ ಕ್ರೀಡೆಯು ಅಷ್ಟೇನೂ ಪರಿಚಿತವಲ್ಲ. ಆದರೆ ರಮೇಶ ಅವರು ಇದರಲ್ಲಿ ಪರಿಣತಿ ಸಾಧಿಸಿರುವುದು ಅಚ್ಚರಿಯ ಸಂಗತಿ. ಅವರಲ್ಲಿ ಮೊದಲಿನಿಂದಲೂ ಇದ್ದ ಕ್ರೀಡಾಸಕ್ತಿ ಹಾಗೂ ಮನೋದೈಹಿಕ ಗಟ್ಟಿತನದಿಂದಾಗಿ ಈಸಾಧನೆ ಸಾಧ್ಯವಾಗಿದೆ. ಇದರಿಂದಾಗಿ ಅವರು ಅಂತರರಾಷ್ಟ್ರೀಯ ಪದಕ ಸಾಧನೆ ಮಾಡಿದ್ದಾರೆ.

ಚೆನೈನಲ್ಲಿ ನಡೆಯುತ್ತಿರುವ ಏಷ್ಯನ್ ಸರ್ಫಿಂಗ್ ಸ್ಪರ್ಧೆಯಲ್ಲಿ ಸಮುದ್ರಕ್ಕೆ ಇಳಿಯುವ ಮುನ್ನ ಮುಗುಳು ನಗೆ ಬೀರಿದ ಸರ್ಫರ್ ರಮೇಶ ಬೂದಿಹಾಳ
ಹೊಟ್ಟೆಪಾಡಿಗೆ ಕೆಲಸ ಮಾಡುತ್ತಲೇ ನನ್ನ ತಮ್ಮ ರಮೇಶ ಅವರು ಸರ್ಫಿಂಗ್ ಕ್ರೀಡೆಯಲ್ಲಿ ದೇಶದ ಗಮನ ಸೆಳೆದಿರುವುದು ಹೆಮ್ಮೆ ಮೂಡಿಸಿದೆ. ಮುಂಬರುವ ಅಂತರರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗಳಲ್ಲಿ ಖಂಡಿತ ಚಿನ್ನದ ಪದಕ ಪಡೆಯುತ್ತಾನೆ.
ಗಣೇಶ ಬೂದಿಹಾಳ ರಮೇಶ ಬೂದಿಹಾಳ ಅವರ ಸಹೋದರ

ಪದಕ ಗೆದ್ದ ಭಾರತದ ಮೊದಲ ಸರ್ಫರ್‌

ಚೆನ್ನೈ: ಕರ್ನಾಟಕದ ರಮೇಶ ಬೂದಿಹಾಳ ಅವರು ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಸರ್ಫರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಮೇಶ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ 12.60 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.  ದಕ್ಷಿಣ ಕೊರಿಯಾದ ಕನೋವಾ ಹೀಜೆ (15.17 ಅಂಕ) ಚಿನ್ನ ಗೆದ್ದರೆ, ಇಂಡೊನೇಷ್ಯಾದ ಪಜರ್ ಅರಿಯಾನಾ (14.57 ಅಂಕ) ಬೆಳ್ಳಿ ತಮ್ಮದಾಗಿಸಿಕೊಂಡರು. 

ಓಪನ್ ಮಹಿಳಾ ವಿಭಾಗದಲ್ಲಿ ಜಪಾನ್‌ನ ಅನ್ರಿ ಮಾಟ್ಸುನೊ (14.90 ಅಂಕ) ಅವರು ಸ್ವದೇಶದ ಸುಮೊಮೊ ಸಾಟೊ (13.70 ಅಂಕ) ಅವರ ತೀವ್ರ ಸವಾಲನ್ನು ಹಿಂದಿಕ್ಕಿ ಚಿನ್ನ ಗೆದ್ದರು. ಥಾಯ್ಲೆಂಡ್‌ನ ಇಸಾಬೆಲ್ ಹಿಗ್ಸ್ (11.76 ಅಂಕ) ಕಂಚು ಜಯಿಸಿದರು.

ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕನೋವಾ 18 ವರ್ಷದೊಳಗಿನ ಬಾಲಕರ ವಿಭಾಗದಲ್ಲೂ (14.33 ಅಂಕ) ಪಾರಮ್ಯ ಮೆರೆದು, ಡಬಲ್‌ ಚಿನ್ನದ ಸಾಧನೆ ಮಾಡಿದರು. ಚೀನಾದ ಶಿಡಾಂಗ್ ವು (13.10 ಅಂಕ) ಶುಲೌ ಜಿಯಾಂಗ್ (8 ಅಂಕ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು. 

18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚೀನಾದ ಸಿಕಿ ಯಾಂಗ್ (14.50 ಅಂಕ) ಚಾಂಪಿಯನ್‌ ಆದರು. ಚೀನಾದ ಮತ್ತೊಬ್ಬ ಸ್ಪರ್ಧಿ ಶುಹಾನ್ ಜಿನ್ (10.33), ಥಾಯ್ಲೆಂಡ್‌ನ ಇಸಾಬೆಲ್ (8.10) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.