
ಗದಗ: ‘ಗದುಗಿನ ಜನತೆಯ ಸಂಕಲ್ಪದಿಂದ ಮಾಡಿದ ಅತಿರುದ್ರ ಯಾಗ ಮುಂದಿನ ದಿನಗಳಲ್ಲಿ ಫಲ ನೀಡಲಿದೆ. ಈ ಮಹಾಯಾಗವನ್ನು ಲೋಕಕಲ್ಯಾಣಕ್ಕಾಗಿ ಮಾಡಲಾಗಿದೆ’ ಎಂದು ನಾಗಾಸಾಧು ಮಹಾಂತ ಸಹದೇವಾನಂದ ಮಹಾರಾಜರು ಹೇಳಿದರು.
ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನ.11ರಿಂದ ನಡೆದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಮಹಾಯಾಗದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ವರ್ಷದೊಳಗೆ ಶಿವ ಒಳ್ಳೆಯದನ್ನೇ ಮಾಡುತ್ತಾನೆ. ಮಹಾಯಾಗದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ’ ಎಂದು ಹೇಳಿದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸಂತರ ಬರುವಿಕೆ ವಸಂತದ ಆಗಮನವಿದ್ದಂತೆ. ವಸಂತದ ಗಾಳಿ ಬಾಡಿದ ಗಿಡದಲ್ಲಿ ಚಿಗುರು ಮೂಡಿಸುವಂತೆ ಸಾಧು-ಸಂತರು ಜನರ ಬದುಕನ್ನು ಹಸನಗೊಳಿಸುತ್ತಾರೆ. ಹೋಮ ಮಾಡಿದರೆ ನಾನು ಮತ್ತು ನನ್ನ ಕುಟುಂಬಕ್ಕೆ ಉತ್ತಮ ಫಲ ನೀಡಲಿ ಎಂಬುದಾಗಿರುತ್ತದೆ. ಆದರೆ, ಯಾಗವು ಸಮಸ್ತ ಲೋಕ ಕಲ್ಯಾಣಕ್ಕಾಗಿ ಜನರಿಗೆ ಸುಖ, ಶಾಂತಿ ನೀಡಲಿ ಎಂಬುದಾಗಿರುತ್ತದೆ’ ಎಂದರು.
‘ಸಾಲುಮರದ ತಿಮ್ಮಕ್ಕ ನಾಲ್ಕೂವರೆ ಕಿ.ಮೀ.ವರೆಗೆ 385 ಆಲದ ಸಸಿಗಳನ್ನು ನೆಟ್ಟು ಪರಿಸರವನ್ನು ಪರಿಶುದ್ಧಗೊಳಿಸಿದ್ದಾರೆ. ಅದರಂತೆ ಎಲ್ಲರೂ ಪರಿಸರ ರಕ್ಷಣೆ ಮಾಡಬೇಕು. ಕಪ್ಪತಗುಡ್ಡದ ಶುದ್ದ ಗಾಳಿ ಏಷ್ಯಾ ಖಂಡದಲ್ಲೇ ಹೆಸರು ಮಾಡಿದೆ. ಯಜ್ಞದಿಂದ ಹೊರಹೊಮ್ಮಿದ ಹೊಗೆಯು ಪರಿಸರವನ್ನು ಉತ್ತಮಗೊಳಿಸುತ್ತದೆ’ ಎಂದು ಹೇಳಿದರು.
ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಸಿ.ಪಾಟೀಲ ಮಾತನಾಡಿ, ‘ಗದುಗಿನಲ್ಲಿ ನ.11ರಿಂದ 18ರವರೆಗೆ ನಡೆದ ಅತಿರುದ್ರ ಮಹಾಯಾಗ, ಕಿರಿಯ ಕುಂಭಮೇಳವು ಯಶಸ್ವಿಯಾಗಲು ಮಹಾಂತ ಸಹದೇವಾನಂದ ಮಹಾರಾಜರು ಕಾರಣರಾಗಿದ್ದಾರೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಗದುಗಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಮಹಿಳೆಯರ ಕುಂಭಮೇಳ ಪ್ರಮುಖ ಪಾತ್ರವಹಿಸಿದೆ’ ಎಂದರು.
ಅತಿರುದ್ರ ಮಹಾಯಾಗ, ಕಿರಿಯ ಕುಂಭಮೇಳ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಮಾತನಾಡಿ, ‘ಗದುಗಿನಲ್ಲಿ ಎಂಟು ದಿನ ನಡೆದ ಕುಂಭಮೇಳ ಇತಿಹಾಸ ನಿರ್ಮಾಣ ಮಾಡಿದೆ. ಜಾತ್ಯಾತೀತ, ಪಕ್ಷಾತೀತವಾಗಿ ತಿಂಗಳಿಂದ ಎಲ್ಲರೂ ಕೆಲಸ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ’ ಎಂದರು.
ಶಿರೋಳ ಮಠದ ಯಚ್ಚರೇಶ್ವರ ಸ್ವಾಮೀಜಿ ಸಮ್ಮುಖವಹಿಸಿದ್ದರು.
ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸೇವಾ ಸಮಿತಿಯ ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ರವಿ ದಂಡಿನ, ಫಕ್ಕೀರಸಾ ಭಾಂಡಗೆ, ಬಿ.ಬಿ.ಅಸೂಟಿ, ರಾಜು ಕುರಡಗಿ, ಬಸವರಾಜ ಬಿಂಗಿ, ವಿ.ಕೆ. ಗುರುಮಠ, ಪ್ರಕಾಶ ಬೊಮ್ಮನಹಳ್ಳಿ, ಗೋಪಾಲ ಅಗರವಾಲ, ಅವಿನಾಶ ಜೈನ್, ವೆಂಕಟೇಶ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.
ಸನಾತನ ಧರ್ಮ ಹಿಂದೂ ಸಂಸ್ಕೃತಿ ಉಳಿಯಬೇಕಾದರೆ ಸಾಧು ಸಂತರ ಮಾರ್ಗದರ್ಶನ ಅಗತ್ಯವಿದೆ. ಗದುಗಿನಲ್ಲಿ ನಡೆದ ಕುಂಭಮೇಳ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕಿಂತ ಕಡಿಮೆ ಇರಲಿಲ್ಲಸಿ.ಸಿ.ಪಾಟೀಲ ಶಾಸಕ
ದೇಶದ ಸಂಸ್ಕೃತಿ ಹಾಳು ಮಾಡಲು ಸಾಕಷ್ಟು ಜನರು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಅಂತಹ ಪವಿತ್ರ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಿದೆ. ನಮ್ಮ ದೇಶವು ಆರ್ಥಿಕವಾಗಿ ಶ್ರೀಮಂತವಾಗಿಲ್ಲ. ಆದರೆ ಧಾರ್ಮಿಕವಾಗಿ ಜಗತ್ತಿಗೆ ಶ್ರೀಮಂತರಿದ್ದೇವೆಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.