ADVERTISEMENT

ಜಿಮ್ಸ್‌ನಲ್ಲಿ ರೋಗಿ ಸಾವು: ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 14:45 IST
Last Updated 31 ಆಗಸ್ಟ್ 2020, 14:45 IST

ಗದಗ: ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 59 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದರಿಂದ ಕೆರಳಿದ ಮೃತರ ಕಡೆಯವರು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮುಳುಗುಂದ ಹೋಬಳಿಯ ಚಿಂಚಲಿ ಗ್ರಾಮದ ಹನುಮಂತಪ್ಪ ಪೂಜಾರ (59) ಅವರನ್ನು ಮನೆಯವರು ಸೋಮವಾರ ಬೆಳಿಗ್ಗೆ ಜಿಮ್ಸ್‌ಗೆ ದಾಖಲಿಸಿದ್ದರು. ವೈದ್ಯರು ಮೊದಲಿಗೆ ರೋಗಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ನಂತರ ಚಿಕಿತ್ಸೆ ಆರಂಭಿಸಿದ್ದರು. ಆದರೆ, ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನವೇ ಮೃತಪಟ್ಟರು.

‘ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ಅವರ ದೇಹದಲ್ಲಿ ಆಕ್ಸಿಜನ್‌ ಪ್ರಮಾಣ ಕೇವಲ 60 ಇತ್ತು. ಅದು 98ರಷ್ಟು ಇರಬೇಕಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್‌ ಕೂಡ ಇರಲಿಲ್ಲ. ಆದರೂ, ವ್ಯವಸ್ಥೆ ಮಾಡಿ ಅಡ್ಮಿಟ್‌ ಮಾಡಿಕೊಂಡೆವು. ಆಕ್ಸಿಜನ್‌ ಒದಗಿಸಿದೆವು. ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗಲೇ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ರೋಗಿ ಬದುಕಿ ಉಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರು’ ಎಂದು ಜಿಮ್ಸ್‌ ನಿರ್ದೇಶಕ ಡಾ. ಬೂಸರೆಡ್ಡಿ ಹೇಳಿದರು.

ADVERTISEMENT

‘ರೋಗಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಅವರ ಕಡೆಯವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದರು. ಅದೃಷ್ಟವಶಾತ್‌ ವೈದ್ಯರು, ನರ್ಸ್‌ಗಳು ತಪ್ಪಿಸಿಕೊಂಡರು. ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪ ಮಾಡಿದ ಅವರು, ಆಸ್ಪತ್ರೆಯೊಳಗೆ ಗಲಾಟೆ ಮಾಡಿದರು. ನಂತರ, ಮೃತದೇಹವನ್ನು ಮಂಚದ ಸಮೇತ ಕೆಳಕ್ಕೆ ಎತ್ತಿಕೊಂಡು ಹೋಗಿ, ತಮ್ಮದೇ ವಾಹನದಲ್ಲಿ ಶವವನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ತಿಳಿಸಿದರು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನೋಡಿದರೆ ಕೋವಿಡ್‌ ತಗುಲಿರುವ ಸಾಧ್ಯತೆ ಹೆಚ್ಚಿತ್ತು. ಆದರೆ, ಪರೀಕ್ಷೆಯ ವರದಿ ಬರುವ ಮುನ್ನವೇ ಶವವನ್ನು ಅವರ ಕಡೆಯವರು ಎತ್ತಿಕೊಂಡು ಹೋಗಿದ್ದಾರೆ ಎಂದು ವೈದ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಬದುಕಿರುವವರ ಬಗ್ಗೆ ಕಾಳಜಿ ಇದೆ’

‘ರೋಗಿ ಮೃತಪಟ್ಟಿದ್ದರಿಂದ ಅವರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿಲ್ಲ. ಮಾತಿನ ರಭಸದಲ್ಲಿ ತಳ್ಳಾಟ ನಡೆದಿದೆಯಷ್ಟೇ. ಮೃತರ ಕೋವಿಡ್‌ ಪರೀಕ್ಷಾ ವರದಿ ಬಂದಿಲ್ಲದ ಕಾರಣ ಮುಂಜಾಗ್ರತೆ ವಹಿಸಿದ್ದೇವೆ. ಅವರ ಮನೆಯಲ್ಲಿ ಹೆಚ್ಚು ಜನರು ಸೇರದಂತೆ ನೋಡಿಕೊಂಡಿದ್ದೇವೆ. ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲೂ ಬದುಕಿರುವವರ ಬಗ್ಗೆ ಕಾಳಜಿ ಮಾಡುವುದು ನಮ್ಮ ಕರ್ತವ್ಯ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.