
ಗದಗ: ತಾಲ್ಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು.
ದೇವು ಗುರುಸ್ವಾಮಿ ಹಾಗೂ ನಾರಾಯಣ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿಯ ಮಹಾಪೂಜೆ ನೆರವೇರಿತು.
ಹೂವಿನ ಅಲಂಕಾರದೊಂದಿಗೆ ಮಂಟಪವನ್ನು ನಿರ್ಮಿಸಿ, ಅಯ್ಯಪ್ಪಸ್ವಾಮಿ ಹಾಗೂ ಗಣೇಶ ಮೂರ್ತಿಯ ಭಾವಚಿತ್ರವನ್ನಿರಿಸಿ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ಭಕ್ತಿಯ ಹಾಡುಗಳನ್ನು ಹಾಡುತ್ತ ವಿಶೇಷ ಪೂಜೆ ನೆರವೇರಿಸಿದರು.
ರಂಗಪ್ಪಜ್ಜ ಸನ್ನಿಧಾನದಲ್ಲಿ ಅಯ್ಯಪ್ಪಸ್ವಾಮಿ ಪೂಜೆಯೊಂದಿಗೆ 18 ಮೆಟ್ಟಿಲುಗಳ ಪೂಜೆ, ಮಂಗಳಾರತಿ ಜತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ಮಹಾಅನ್ನಸಂತರ್ಪಣೆ ನೆರವೇರಿತು.
ಮಾಲಾಧಾರಿಗಳಾದ ಉಮೇಶ ಕನವಳ್ಳಿ, ಪಂಪಣ್ಣ ಶ್ಯಾವಿ, ತಮೇಶ ತಟ್ಟಿ, ಮೈಲಾರಪ್ಪ ಶ್ಯಾವಿ, ರಾಜು ಕನಕಿ, ನಗರಸಭೆ ಸದಸ್ಯೆ ಲಕ್ಷ್ಮೀ ಕಾಕಿ, ಶಂಕರ ಕಾಕಿ ಹಾಗೂ ಖಾದಿ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಲ್ಲಯ್ಯ ಹಿರೇಮಠ ಸೇರಿ ಸಮಿತಿಯ ಪದಾಧಿಕಾರಿಗಳು ಹಾಗೂ ಖಾದಿ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.
ಭಾನುವಾರ ಬೆಳಿಗ್ಗೆ 7ಕ್ಕೆ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಸಂಜೆ 5ಕ್ಕೆ ವರಸಿದ್ಧಿ ವಿನಾಯಕ ಸನ್ನಿಧಾನದಿಂದ ಗುರುಸ್ವಾಮಿಗಳು ಹಾಗೂ ಮಾಲಾಧಾರಿಗಳು ಶ್ರೀ ರಂಗಪ್ಪಜ್ಜನ ಮಠದವರೆಗೆ ಪಾದಯಾತ್ರೆ ಮೂಲಕ ಸಾಗಿ, ಅಲ್ಲಿಂದ ಶಬರಿಮಲೆ ಯಾತ್ರೆ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.