ADVERTISEMENT

ಬಗರ್ ಹುಕುಂ ಹೋರಾಟಕ್ಕೆ ವಿರಾಮ

ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ಜಿಲ್ಲಾಡಳಿತ: ರವಿಕಾಂತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 4:50 IST
Last Updated 17 ಸೆಪ್ಟೆಂಬರ್ 2022, 4:50 IST
ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ನಂತರ ಬಗರ್ ಹುಕುಂ ಸಾಗುವಳಿದಾರರು ಅಹೋರಾತ್ರಿ ಧರಣಿ ಅಂತ್ಯಗೊಳಿಸಿದರು
ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ನಂತರ ಬಗರ್ ಹುಕುಂ ಸಾಗುವಳಿದಾರರು ಅಹೋರಾತ್ರಿ ಧರಣಿ ಅಂತ್ಯಗೊಳಿಸಿದರು   

ಶಿರಹಟ್ಟಿ: ತಹಶೀಲ್ದಾರ್‌ ಕಚೇರಿ ಎದುರು ನಡೆಯುತ್ತಿದ್ದ ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿ ಹಲವಾರು ಚರ್ಚೆ ಹಾಗೂ ಒಪ್ಪಂದಗಳ ಮೂಲಕ ಶುಕ್ರವಾರ ಅಂತ್ಯಗೊಂಡಿತು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಸಂಜೆ 4ಕ್ಕೆ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೆಲವು ರೈತರು ಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿ ತಾರ್ಕಿಕ ಅಂತ್ಯಗೊಳಿಸಿದ್ದಾರೆ.

ನಂತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಪ್ರತಿಭಟನೆಯ ರೂವಾರಿ ರವಿಕಾಂತ ಅಂಗಡಿ, ನಮ್ಮ ಬೇಡಿಕೆ ಈಡೇರಿಕೆಗಾಗಿ ಜಿಲ್ಲಾಡಳಿತ ಸಭೆ ಕರೆದಿತ್ತು. ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ತಿರಸ್ಕೃತಗೊಂಡಿರುವ ಅರಣ್ಯ ಹಕ್ಕು ಸಮಿತಿಯ 802 ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಿ, ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಒದಗಿಸಲು ಕ್ರಮ ತೆಗೆದುಕೊಂಡಿದೆ’ ಎಂದು ತಿಳಿಸಿದರು.

ADVERTISEMENT

ಅರಣ್ಯ ಪ್ರದೇಶದಲ್ಲಿ ಈಗಾಗಲೇ ನಿರ್ಮಾಣ ಮಾಡಿದ ಮನೆಗಳಿಗೆ ಹಕ್ಕಪತ್ರ ನೀಡಲು ಹಾಗೂ ಮನೆ ಕಟ್ಟವಂತಹ ರೈತರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂಬ ಭರವಸೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಜೀವಹಾನಿ ಮಾಡಿಕೊಳ್ಳಬಾರದು. ರೈತರ ಮೇಲಾಗುತ್ತಿರುವ ಅಹಿತಕರ ಘಟನೆಗಳು ಸಂಭವಿಸಿದ ಹಾಗೆ ಕ್ರಮ ವಹಿಸಲಾಗುವುದು ಎಂಬ ಭರವಸೆ ನೀಡಿ, ಹೋರಾಟಕ್ಕೆ ತಾತ್ಕಾಲಿಕ ಜಯ ಘೋಷಿಸಿದ ಜಿಲ್ಲಾಡಳಿತಕ್ಕೆ, ಹಾಗೂ ಹೋರಾಟಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರು ಜಿಲ್ಲಾಡಳಿದ ಮುಂದಿಟ್ಟ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದೆ. ಈಗಾಗಲೇ ತಿರಸ್ಕರತಗೊಂಡ 802 ಅರ್ಜಿಗಳನ್ನು ನ.15ರ ನಂತರ ಪರಿಶೀಲನೆ ಮಾಡಲಾಗುವುದು. ನಿಯಮದ ಪ್ರಕಾರ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಲ್ಲದೇ ಚರ್ಚೆಯಾಗಿ ನಿರ್ಣಯಿಸಿದ ಎಲ್ಲಾ ನಿಯಮಗಳನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ’ ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಕಲಗೌಡ ಪಾಟೀಲ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಪ್ರವೀಣ ಗಂಗೋಳ, ಎನ್.ಟಿ.ಪೂಜಾರ, ಶಿವು ಲಮಾಣಿ, ಮಾಂತೇಶ ನಾದಿಗಟ್ಟಿ, ಹನುಮಂತ ವಡ್ಡರ, ಈರಣ್ಣ ಚವ್ಹಾಣ ಇದ್ದರು.

ಅರಣ್ಯ ಹಕ್ಕು ಅಧಿನಿಯಮದ ಪ್ರಕಾರ ರೈತರ ವಿರುದ್ಧ ಯಾವುದೇ ಹೊಸ ಪ್ರಕರಣ ದಾಖಲು ಮಾಡದೆ, ರೈತರಿಗೆ ಕಿರುಕುಳ ನೀಡುವುದಿಲ್ಲ ಎಂದು ಸಭೆಯಲ್ಲಿ ಭರವಸೆ ಸಿಕ್ಕಿದೆರವಿಕಾಂತ ಅಂಗಡಿ,ಪ್ರತಿಭಟನೆಯ ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.