ADVERTISEMENT

ಗದಗ: ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಅರೆಬೆತ್ತಲೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:00 IST
Last Updated 15 ಅಕ್ಟೋಬರ್ 2025, 6:00 IST
ಬಂಜಾರ ಸಮುದಾಯದ ಜನರು ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು
ಬಂಜಾರ ಸಮುದಾಯದ ಜನರು ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು   

ಗದಗ: ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಗದಗ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ನಡೆಯುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. 

ನಭಾಪುರ, ಡೋಣಿ ತಾಂಡಾ, ಬಸಾಪುರ, ಮಾಗಡಿ, ಮಾಗಡಿ ತಾಂಡಾ, ಅದ್ರಳ್ಳಿ ತಾಂಡಾ, ಹೊಳೆಆಲೂರ ತಾಂಡಾ ಹಾಗೂ ದಿಂಡೂರ ತಾಂಡಾಗಳ ನೂರಾರು ಬಂಜಾರರು ಮಂಗಳವಾರದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರು ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

‘ಒಳಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ತಾರತಮ್ಯ ತೋರಿದ್ದು, ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. 

ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ‘ಕೊಲಂಬೊ ಸಮುದಾಯಗಳ ನಾಯಕರು ಪ್ರತಿದಿನ ವಿಭಿನ್ನ ರೀತಿಯ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಬುಧವಾರದಂದು ಯಲಿಶಿರುಂಜ, ಅತ್ತಿಕಟ್ಟಿ, ಬೂದಿಹಾಳ, ಕುಂದ್ರಳ್ಳಿ, ಯಲ್ಲಾಪೂರ, ನಾಗರಸಕೊಪ್ಪ, ಕಣವಿ ತಾಂಡಾಗಳ ಬಂಜಾರರು ಅ.14ರಂದು ಬೆಳಿಗ್ಗೆ 11ಕ್ಕೆ ನಗರದ ಚನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ ‘ಲವಣ ಮಾರಾಟ’ ಮಾಡಿ ಪ್ರತಿಭಟನೆ ನಡೆಸುವರು ಎಂದು ತಿಳಿಸಿದರು.

ಹೋರಾಟದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ಗದಗ, ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ಬಂಜಾರ ಸಮಾಜದ ಜನರು ಭಾಗವಹಿಸಿದ್ದರು. 

Highlights - ಸರ್ಕಾರದ ವಿರುದ್ಧ ಬಂಜಾರರ ಆಕ್ರೋಶ ಮುಂದುವರಿದ ಧರಣಿ: ವಿವಿಧ ತಾಂಡಾಗಳ ಜನರು ಭಾಗಿ ಚನ್ನಮ್ಮ ವೃತ್ತದಿಂದ ಮುಂದುವರಿದ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.