ADVERTISEMENT

ಪ್ರಗತಿಪರರಿಂದಲೇ ದೇಶ ಹಾಳು: ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಯತ್ನಾಳ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 2:55 IST
Last Updated 19 ಸೆಪ್ಟೆಂಬರ್ 2022, 2:55 IST
ಗದುಗಿನ ಸುದರ್ಶನ ಯುವ ಚಕ್ರ ಮಂಡಳದವರು ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಗದುಗಿನ ಸುದರ್ಶನ ಯುವ ಚಕ್ರ ಮಂಡಳದವರು ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ಗದಗ: ‘ದೇಶಕ್ಕೆ ಸ್ವಾತಂತ್ರ್ಯ ಸಿಗಲು ಗಣಪತಿಯೇ ಕಾರಣ. ತಿಲಕರು ದೇಶಭಕ್ತರನ್ನೆಲ್ಲಾ ಒಂದೆಡೆ ಸೇರಿಸಲು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಅದರ ಭಾಗವಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದರ್ಶನ ಯುವ ಚಕ್ರ ಮಂಡಳ ಹಾಗೂ ವಿಶ್ವ ಹಿಂದೂ ಪರಿಷತ್‌ನವರು ನಗರದ ಕೆ.ಎಚ್‌.ಪಾಟೀಲ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆಲವು ಬಾಲಿವುಡ್‌ ನಟರಿಗೆ ಭಾರತ ಸುರಕ್ಷಿತ ಅಲ್ಲವಂತೆ. ಅಂತವರಿಗೆ ನಮ್ಮ ದೇಶದಲ್ಲಿ ಇರು ಎಂದವರು ಯಾರು? ಇನ್ನು ಕೆಲವರು ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನ್‌ ಜಿಂದಾಬಾದ್‌ ಅನ್ನುತ್ತಾರೆ. ಭಾರತದಲ್ಲಿ ಕೆಲವು ಹೈಬ್ರಿಡ್‌ ಹಿಂದೂಗಳಿದ್ದಾರೆ. ಅವರು ಹಿಂದೂ ದೇವಸ್ಥಾನಗಳಿಗೆ ಹೋಗುವುದಿಲ್ಲ. ಬದಲಿಗೆ ಮಸೀದಿ, ದರ್ಗಾಗಳಿಗೆ ಹೋಗುತ್ತಾರೆ. ಪ್ರಗತಿಪರರು, ಬುದ್ಧಿಜೀವಿಗಳಿಂದಲೇ ದೇಶ ಹಾಳಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ನೆಹರೂ ಕೊಡುಗೆ ಏನಿಲ್ಲ’ ಎಂದು ಕಿಡಿಕಾರಿದರು.

‘ಸ್ವಾತಂತ್ರ್ಯವೀರ ಸಾವರ್ಕರ್‌ ಅವರ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಅವರು ಎಲ್ಲರಿಗೂ ತಿಳಿಯುವಂತಾದರು. ಅವರು ಮಾಡಿದ ಒಳ್ಳೆ ಕೆಲಸದ ಬಗ್ಗೆ ನನ್ನ ಮೆಚ್ಚುಗೆ ಇದೆ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸಿ, ಮೈಸೂರಿನ ಸ್ವಕ್ಷೇತ್ರದಲ್ಲಿ ಗೆಲ್ಲಲಾಗದೇ ಮಕಾಡೆ ಮಲಗಿ ಕೊಂಡರು. ಉತ್ತರ ಕರ್ನಾಟಕದ ಜನರು ಕೈಹಿಡಿದರು. ಟಿಪ್ಪು ಆರಾಧಿಸಿದವರೆಲ್ಲರೂ ಹಾಳಾಗಿ ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

‘ಹಿಂದೂಸ್ತಾನಕ್ಕೆ ಅಳುಬುರಕ ಸಿಂಹ ಬೇಕಿಲ್ಲ. ಭಾರತಕ್ಕೆ ಕ್ರೂರ ಸಿಂಹ ಬೇಕಿದೆ. ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಒಡೆದಿದ್ದು ಯಾರು’ ಎಂದು ಪ್ರಶ್ನಿಸಿದರು.

‘ಅರಬ್‌ ರಾಷ್ಟ್ರಗಳು ನಮ್ಮಿಂದಲೇ ಭಾರತದ ವಾಹನಗಳು ಓಡುತ್ತಿವೆ ಎಂದು ಬೀಗುತ್ತಿದ್ದಾರೆ. ಸದ್ಯದಲ್ಲೇ ಅವರ ಬಾಯಿ ಬಂದ್‌ ಆಗಲಿದೆ. ಇಥೆನಾಲ್‌ ಮೂಲಕ ಸ್ಕೂಟರ್‌, ಕಾರು ಓಡಾಡಲು ಪ್ರಾರಂಭಿಸಿದರೆ ಅವರು ಪೆಟ್ರೋಲ್‌ ಕುಡಿಯಬೇಕಷ್ಟೇ’ ಎಂದು ಕುಹಕವಾಡಿದರು.

ಶ್ರೀಕಾಂತ ಖಟವಟೆ, ರವಿ ಶಿದ್ಲಿಂಗ, ಲಕ್ಷ್ಮಣ ದೊಡ್ಡಮನಿ, ಸುಧೀರ ಕಾಟೀಗರ, ಶಿವರಾಜಗೌಡ ಹಿರೇಮನಿಪಾಟೀಲ, ಮಂಜುನಾಥ ಕೊಟ್ನಿಕಲ್, ರಾಘವೇಂದ್ರ ಹಬೀಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.