ADVERTISEMENT

ಗದಗ | ಸಿಎಂ ಮಾನ ಉಳಿಸಲಾದರೂ ನೀರಿನ ಸಮಸ್ಯೆ ಬಗೆಹರಿಸಿ; ಬಸವರಾಜ ಬೊಮ್ಮಾಯಿ

ಅವಳಿ ನಗರಕ್ಕೆ ನೀರು ಕೊಡಬಾರದೆಂದು ಎಲ್ಲರಿಂದಲೂ ಪ್ರಯತ್ನ: ಬೊಮ್ಮಾಯಿ ಚಾಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 3:06 IST
Last Updated 18 ಜುಲೈ 2025, 3:06 IST
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ದಿಶಾ ಸಭೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ದಿಶಾ ಸಭೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.   

ಗದಗ: ಗದಗ ಬೆಟಗೇರಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ 1997ರಿಂದಲೂ ಕೇಳುತ್ತಿದ್ದೇನೆ. ಇಲ್ಲಿಗೆ ಬರುವ ಅಧಿಕಾರಿಗಳೆಲ್ಲರೂ ಈ ನಗರಕ್ಕೆ ಹೇಗೆ ನೀರು ಕೊಡಬಾರದು ಅಂತ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. 24/7 ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ, ಇನ್ನು ಮುಂದೆ ಎಲ್ಲೆಲ್ಲೂ ನೀರಿನ ಹೊಳೆ ಅಂತ ಹೇಳಿದ್ದರು. ಆದರೂ, 15ದಿನ, ತಿಂಗಳಿಗೊಮ್ಮೆ ನೀರು ಬರುತ್ತಿದೆ. ಯೋಜನೆ ಉದ್ಘಾಟಿಸಿದ ಸಿಎಂ ಮಾನ ಕಾಪಾಡಲಿಕ್ಕಾದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ...

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ( ದಿಶಾ) ಸಮಿತಿ ಸಭೆ ಹಾಗೂ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಮಾಡುವ ಯೋಜನೆಗೆ 2017ರಲ್ಲಿಯೇ ಚಾಲನೆ ನೀಡಲಾಗಿದೆ. ಆದರೂ ವಾರ್ಡ್‌ವಾರು ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಂಭೀರ ಕ್ರಮವಹಿಸಬೇಕು ಎಂದು ಸೂಚಿಸಿದರು.

ADVERTISEMENT

‘ನೀರು ಪೂರೈಕೆಯಲ್ಲಿ ಇರುವ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ನಗರಸಭೆ ಕ್ರಮವಹಿಸಬೇಕು. ಸಮಸ್ಯೆ ಬಗೆಹರಿಸಲು ಸ್ವಂತ ಅನುದಾದ ಖರ್ಚು ಮಾಡಿ ಜನರಿಗೆ ವಾರಕ್ಕೆ ಒಮ್ಮೆಯಾದರೂ ನೀರು ಪೂರೈಸಬೇಕು. ಶಾಶ್ವತ ಪರಿಹಾರಕ್ಕೆ ಬೇಕಿರುವ ಅನುದಾನವನ್ನು ಸರ್ಕಾರದಿಂದ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಶಾಸಕರಾದ ಸಿ.ಸಿ.ಪಾಟೀಲ ಹಾಗೂ ಎಸ್.ವಿ.ಸಂಕನೂರ ಅವರು ಸಹ ಸಭೆಯಲ್ಲಿ ಸುದೀರ್ಫವಾಗಿ ಚರ್ಚಿಸಿದರು.

‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಗಿಂತ ಹೆಚ್ಚಾಗಿದೆ. ಅದಕ್ಕಾಗಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಅಗತ್ಯವಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ, ‘ಜಿಲ್ಲೆ ಸೇರಿದಂತೆ ರಾಜ್ಯದ ಒಟ್ಟು ರಸಗೊಬ್ಬರದ ಬೇಡಿಕೆ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿ ಮಾಹಿತಿ ಒದಗಿಸಿದ್ದಲ್ಲಿ ರಸಗೊಬ್ಬರ ಪೂರೈಕೆಗೆ ಪ್ರಯತ್ನಿಸಲಾಗುವುದು’ ಎಂದರು.

‘ಕೃಷಿ ಇಲಾಖೆ ಆಯುಕ್ತ ವೈ.ಎಸ್‌.ಪಾಟೀಲ ಅವರು ರಸಗೊಬ್ಬರ ಕೊರತೆಯನ್ನು ಸಂಸದರ ಗಮನಕ್ಕೆ ತರುವಂತೆ ತಿಳಿಸಿದ್ದಾರೆ’ ಎಂಬ ಮಾತಿಗೆ ಕೋಪಗೊಂಡ ಸಂಸದರು, ‘ಸಿಎಂ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಪ್ರೋಟೊಕಾಲ್‌ ಎನ್ನುತ್ತಾರೆ. ಇದೇನಾ ಶಿಷ್ಟಾಚಾರ. ರಸಗೊಬ್ಬರ ಕೊರತೆ ಇದ್ದಲ್ಲಿ ಆಯುಕ್ತರು ಕೃಷಿ ಸಚಿವರ ಜತೆಗೆ ಮಾತನಾಡಬೇಕು. ಅವರು ಕೇಂದ್ರ ಸಚಿವರ ಜತೆಗೆ ಮಾತನಾಡುತ್ತಾರೆ. ಅದು ಬಿಟ್ಟು, ನಿಮ್ಮಿಂದ ನನಗೆ ಹೇಳಿಸುವುದು ಶಿಷ್ಟಾಚಾರವೇ’ ಎಂದು ಪ್ರಶ್ನಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಪ್ರಾಥಮಿಕ ಶಾಲೆಗಳು ಸರ್ಕಾರದ ಭಾಗ ಆಗುವುದು ಬೇಡ. ಡಿಡಿಪಿಐ, ಬಿಇಒಗಳು ಬೇಡ. ಪ್ರಾಥಮಿಕ ಶಾಲೆಗಳನ್ನು ಅತಿಥಿ ಶಿಕ್ಷಕರೇ ನಡೆಸಲಿ’ ಎಂದರು.

ವಸತಿ ಯೋಜನೆ ಕುರಿತಂತೆ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಪುರಸ್ಕೃತ ಯೋಜನೆಗಳ ಗುರಿ ಸಾಧನೆಗೆ ಅಧಿಕಾರಿವರ್ಗ ಕಾರ್ಯ ಪ್ರವೃತ್ತರಾಗಬೇಕು. ಆ ಮೂಲಕ ಪ್ರತಿ ಅರ್ಹ ಕುಟುಂಬಕ್ಕೂ ಸೂರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಿರ್ದೇಶಿಸಿದರು.

ಹಿಂದಿನ ಸಭೆಯಲ್ಲಿ ಸೂಚಿಸಿದ ಕಾರ್ಯಗಳನ್ನು ಸರಿಯಾಗಿ ಅನುಷ್ಟಾನಗೊಳಿಸಿ ವಿಶಿಷ್ಟ ಸಾಧನೆಯೊಂದಿಗೆ ಅಧಿಕಾರಿಗಳು ಸಭೆಗೆ ಬರಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ದೇಶದಲ್ಲಿ ಆಹಾರ ಕೊರತೆ ನೀಗಿದೆ. ವಸತಿ ಸಮಸ್ಯೆ ಉಳಿದಿದೆ. ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಜತೆಗೆ ಆರೋಗ್ಯ ಕೌಶಲಾಧಾರಿತ ಶಿಕ್ಷಣ ಒದಗಿಸಲು ಕ್ರಮವಹಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಗಳ ನಿಗದಿತ ಗುರಿ ಸಾಧಿಸದವರ ಮೇಲೆ ಕ್ರಮಕೈಗೊಳ್ಳಲಾಗುವುದು
–ಬಸವರಾಜ ಬೊಮ್ಮಾಯಿ ಸಂಸದ

9436 ಶೌಚಾಲಯ ನಿರ್ಮಾಣ ಪೂರ್ಣ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯಲ್ಲಿ 13884 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು 9436 ಶೌಚಾಲಯ ನಿರ್ಮಾಣ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದರು. ಬೂದು ನೀರು ನಿರ್ವಹಣೆಯಲ್ಲಿ 590 ಕಾಮಗಾರಿಗಳ ಗುರಿ ಹೊಂದಲಾಗಿದ್ದು 236 ಕಾಮಗಾರಿ ಪೂರ್ಣಗೊಳಿಸಲಾಗಿದೆ. 232 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.