ಲಕ್ಷ್ಮೇಶ್ವರ: ‘ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಸರ್ಕಾರಗಳು ನಿರಂತರ ಕೆಲಸ ಮಾಡುತ್ತಲೇ ಬಂದಿವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈ ಜೋಡಿಸಬೇಕು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ತಾಲ್ಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿವೇಕ ಕೊಠಡಿ ಯೋಜನೆಯಡಿ ₹34.30 ಲಕ್ಷ ವೆಚ್ಚದಲ್ಲಿ ಶುಕ್ರವಾರ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಆಗಬೇಕು ಮತ್ತು ಶಿಕ್ಷಣದ ಗುಣಮಟ್ಟದ ಎತ್ತರಕ್ಕೇರಬೇಕಾದಲ್ಲಿ ಮೊದಲ ಆದ್ಯತೆಯಾಗಿ ಹೆಚ್ಚಿನ ಅನುದಾನ, ಸೌಲಭ್ಯ ಕಲ್ಪಿಸುವುದು ಮುಖ್ಯ. ಅದಕ್ಕೆ ತಕ್ಕಂತೆ ಶಿಕ್ಷಕರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಬೇಕು. ಪಾಲಕರೂ ಇಂಗ್ಲಿಷ್ ಮಾಧ್ಯಮ ವ್ಯಾಮೋಹ ಬಿಟ್ಟು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು’ ಎಂದರು.
‘ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು. ಕ್ಷೇತ್ರ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.
ದೊಡ್ಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಈಳಿಗೇರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಂಜಣ್ಣ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ, ಮಹಾಂತಗೌಡ ಭರಮಗೌಡ್ರ, ತುಕ್ಕಪ್ಪ ಪೂಜಾರ, ಸಕ್ರಪ್ಪ ಕಡೆಮನಿ, ಫಕ್ಕೀರಗೌಡ ಭರಮಗೌಡ್ರ, ಮಹಾಂತೇಶ ಹರಕುಣಿ, ಹನುಮಂತಪ್ಪ ಲಮಾಣಿ, ರಾಮಣ್ಣ ಲಮಾಣಿ, ಕಿರಣ ಲಮಾಣಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.