ADVERTISEMENT

ಗದಗ: ದ್ವೇಷ ಭಾಷಣ ಮಸೂದೆ ಜಾರಿಗೆ ವಿರೋಧ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:04 IST
Last Updated 25 ಡಿಸೆಂಬರ್ 2025, 3:04 IST
ಗದಗ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು
ಗದಗ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು   

ಗದಗ: ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ ಆಗ್ರಹಿಸಿದರು.

ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಸಂವಿಧಾನಕ್ಕೆ ವಿರುದ್ಧವಿದ್ದು, ಇದನ್ನು ಜಾರಿಗೊಳಿಸದಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬುಧವಾರ ನಗರದ ಗಾಂಧಿ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಸಂವಿಧಾನ ನೀಡಿದ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳಲು ಈ ಮಾರ್ಗ ಅನುಸರಿಸುತ್ತಿದೆ. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಅಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೇ ಇರುವಂತೆ ಮಾಡುವುದೇ ಸರ್ಕಾರದ ಉದ್ದೇಶವೇ’ ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿ ಮುಖಂಡ ಎಂ.ಎಸ್‌. ಕರಿಗೌಡ್ರ ಮಾತನಾಡಿ, ‘ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ ತರುವುದು ಮಾತ್ರವಲ್ಲ; ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನವಾಗಿದೆ’ ಎಂದರು.

‘ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕಾಯ್ದೆ ನಮಗೆ ಬೇಕೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ‘ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿ ನಾಶಪಡಿಸುವ ಇಂತಹ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು’ ಎಂದರು.

ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮತ್ತು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ‘ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿ ನಿರ್ಬಂಧಿಸುವ ಮೂಲಕ ಇದು ಪ್ರಜಾಪ್ರಭುತ್ವ ದುರ್ಬಲಗೊಳಿಸಲಿದೆ. ದೇಶದ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ವಿಧೇಯಕ ಜಾರಿಗೊಳಿಸಲು ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

ಪ್ರಮುಖರಾದ ಬಿ.ಎಸ್.ಚಿಂಚಲಿ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ಅನೀಲ ಅಬ್ಬಿಗೇರಿ, ಅಶೋಕ ಕುಡತಿನಿ, ದಶರಥರಾಜ ಕೊಳ್ಳಿ, ಚಂದ್ರು ತಡಸದ, ಶಿವು ಹಿರೇಮನಿಪಾಟೀಲ, ಅಮರನಾಥ ಗಡಗಿ ಸೇರಿದಂತೆ ನೂರಾರು ಮಂದಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಧೇಯಕದ ಅಡಿ ಪ್ರತಿಬಂಧಕ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳನ್ನು ತಡೆಯುವ ಉದ್ದೇಶ ಇದ್ದಂತಿದೆ.
ಲಿಂಗರಾಜ ಪಾಟೀಲ ಜಿಲ್ಲಾ ಪ್ರಧಾನಕಾರ್ಯದರ್ಶಿ
ಈ ವಿಧೇಯಕದ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವ ಹೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಸೇರಿದಂತೆ ಸಂಘ ಸಂಸ್ಥೆಗಳನ್ನು ದಮನ ಮಾಡಲು ಸರ್ಕಾರ ಹೊರಟಿದೆ
ಎಂ.ಎಂ.ಹಿರೇಮಠ ಬಿಜೆಪಿ ಗದಗ ಜಿಲ್ಲಾ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.