ADVERTISEMENT

ಪ್ರಜಾಪ್ರಭುತ್ವ ಗೌರವಿಸುವ ಗುಣ ಕಾಂಗ್ರೆಸ್‌ಗಿಲ್ಲ: ಟೀಕೆ

ತುರ್ತು ಪರಿಸ್ಥಿತಿಗೆ 50 ವರ್ಷಗಳು: ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:43 IST
Last Updated 12 ಜುಲೈ 2025, 4:43 IST
ಗದಗ ನಗರದ ವಿಠ್ಠಲಾರೂಢ ಸಮುದಾಯ ಭವನದಲ್ಲಿ ನಡೆದ ‘ತುರ್ತು ಪರಿಸ್ಥಿತಿಗೆ 50 ವರ್ಷಗಳು: ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ’ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಸಂಸದ ಬಸವರಾಜ ಬೊಮ್ಮಾಯಿ ಇದ್ದಾರೆ
ಗದಗ ನಗರದ ವಿಠ್ಠಲಾರೂಢ ಸಮುದಾಯ ಭವನದಲ್ಲಿ ನಡೆದ ‘ತುರ್ತು ಪರಿಸ್ಥಿತಿಗೆ 50 ವರ್ಷಗಳು: ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ’ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಸಂಸದ ಬಸವರಾಜ ಬೊಮ್ಮಾಯಿ ಇದ್ದಾರೆ   

ಗದಗ: ‘ಸಂವಿಧಾನ, ಪ್ರಜಾಪ್ರಭುತ್ವದ ಮೂಲ ನಂಬಿಕೆಗಳನ್ನು ಗೌರವಿಸುವ ಗುಣ ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇಲ್ಲ. ಪ್ರಜಾಪ್ರಭುತ್ವದ ರಕ್ಷಕರು ನಾವು ಎಂದು ಹೇಳುತ್ತಾ ಕಿಸೆಯಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುವವರಿಗೆ ಇದು ಗೊತ್ತಾಗಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಸಿಟಿಜನ್ಸ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌ ಸಂಸ್ಥೆಯು ನಗರದ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷಗಳು: ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿದೆ. ಆದರೆ, ಅದನ್ನು ಕಪಿಮುಷ್ಠಿಗೆ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಸದಾಕಾಲ ಮಾಡಿದೆ’ ಎಂದು ಹರಿಹಾಯ್ದರು.

ADVERTISEMENT

‘ದೇಶಕ್ಕೆ ಸ್ವಾತಂತ್ರ್ಯ ಬಂದು ಸಾರ್ವಜನಿಕ ಚುನಾವಣೆ ನಡೆಯುವ ಮುನ್ನವೇ ನೆಹರೂ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು. ಮಾಧ್ಯಮಗಳು ಟೀಕಿಸಿದವು ಎಂಬ ಕಾರಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವನ್ನು 1951ರಲ್ಲೇ ನೆಹರೂ ಮಾಡಿದ್ದರು’ ಎಂದು ಆರೋಪಿಸಿದರು.

‘ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದರು. 2.23 ಲಕ್ಷ ಮಂದಿಯನ್ನು ಜೈಲಿಗಟ್ಟಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷಗಳ ಯಾವೊಬ್ಬ ನಾಯಕರೂ ಹೊರಗಡೆ ಇರಲಿಲ್ಲ. ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕಿದರು. ಇಂದಿರಾ ಗಾಂಧಿ ಹಿಟ್ಲರ್‌ ರೀತಿಯೇ ಇದ್ದರು. ತಮ್ಮ ಅನುಕೂಲಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿದರು. ಮೂಲ ಸಂವಿಧಾನಕ್ಕೂ ಇವರು ತಿದ್ದುಪಡಿ ಮಾಡಿದ ನಂತರದ ಸಂವಿಧಾನಕ್ಕೂ ಅಜಗಜಾಂತರ ವ್ಯತ್ಯಾಸ ಇದೆ’ ಎಂದು ಆರೋಪ ಮಾಡಿದರು.

‘ನೆಹರೂ ಅವರು ಪ್ರಧಾನಿ ಆದಾಗ ದೇಶದಲ್ಲಿನ ಬಡತನ ನಿರ್ಮೂಲನೆ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದರು. ನಂತರ ಇಂದಿರಾ ಗಾಂಧಿ ಅವರು ಕೂಡ ಗರೀಬಿ ಹಠಾವೋ ಅಂದರು. ರಾಜೀವ್‌ ಗಾಂಧಿ, ಮನ್‌ಮೋಹನ್‌ ಸಿಂಗ್‌ ಅವರು ಕೂಡ ಅದನ್ನೇ ಹೇಳಿದರು. ಆದರೆ, ಬಡತನ ಮಾತ್ರ ನಿರ್ಮೂಲನೆ ಆಗಲಿಲ್ಲ. ಬದುಕಿದ್ದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್ಸಿಗರು ಈಗ ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಜನರಿಗೆ ಮನದಟ್ಟು ಮಾಡಲು ಜಾಗೃತಿ ಸಭೆ ಮಾಡಲಾಗಿದೆ’ ಎಂದರು.

ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಶಾಸಕ ಸಿ.ಸಿ.ಪಾಟೀಲ, ಡಾ. ಚಂದ್ರು ಲಮಾಣಿ, ರಾಜ್ಯ ಸಮಿತಿ ಸಂಚಾಲಕ ಮಹೇಂದ್ರ ಕೌತಾಳ ವೇದಿಕೆಯಲ್ಲಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಕೃಷ್ಣ ಹೊಂಬಾಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗದಗ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ನಿರೂಪಣೆ ಮಾಡಿದರು. ಮುಖಂಡರಾದ ಪ್ರಶಾಂತ್‌ ನಾಯ್ಕರ, ಫಕ್ಕಿರೇಶ ರಟ್ಟಿಹಳ್ಳಿ, ಆರ್‌.ಕೆ.ಚವ್ಹಾಣ, ರಮೇಶ ಸಜ್ಜಗಾರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಇದ್ದರು.

ಎಚ್‌.ಕೆ.ಪಾಟೀಲ ಕಾನೂನು ಸಚಿವರಿದ್ದಾರೆ. ನಿಜವಾಗಿಯೂ ಅವರು ತುರ್ತು ಪರಿಸ್ಥಿತಿ ಸಮರ್ಥಿಸಿಕೊಳ್ಳುತ್ತಾರೆಯೇ? ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾನತೆ ಸಾಮಾಜಿಕ ನ್ಯಾಯ ಇದರನ್ವಯ ತುರ್ತು ಪರಿಸ್ಥಿತಿ ಘೋಷಣೆ ಆಗಿತ್ತಾ? ನೀವು ಇದನ್ನು ಸಮರ್ಥನೆ ಮಾಡಿಕೊಂಡರೇ ಅವತ್ತೇ ಸಂವಿಧಾನ ಕೈಬಿಡಬೇಕು
ಬಸವರಾಜ ಬೊಮ್ಮಾಯಿ ಸಂಸದ

‘ಇಂದಿರಾಗಾಂಧಿ ಶಾಶ್ವತ ಅಧಿಕಾರದ ಚಿಂತನೆ ಹೊಂದಿದ್ದರು’:

‘ಇಂದಿರಾ ಗಾಂಧಿ ಇಡೀ ದೇಶದ ಜನರನ್ನು ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವೆ ಎಂಬ ಭ್ರಮೆ ಹೊಂದಿದ್ದರು. ಅವರು ಪ್ರಜೆ ಆಗಿರಲಿಲ್ಲ. ನಾವು ಆಳುವುದಕ್ಕೆ ಹುಟ್ಟಿದ್ದೇವೆ. ಮಿಕ್ಕವರು ಆಳಿಸಿಕೊಳ್ಳಲು ಹುಟ್ಟಿದ್ದಾರೆ ಎಂಬ ಭಾವವಿತ್ತು. ಅವರು ಶಾಶ್ವತ ಅಧಿಕಾರದ ಚಿಂತನೆ ಹೊಂದಿದ್ದರು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.   ತುರ್ತು ಪರಿಸ್ಥಿತಿ ಹೇರುವ ಸಂದರ್ಭ ಆಗ ಅವರು ನಡೆದುಕೊಂಡ ರೀತಿ ನಡೆದ ಘಟನೆಗಳು ಯಾರೂ ಊಹಿಸಲು ಸಾಧ್ಯವಿಲ್ಲ ಎಂದರು. ‘ನರೇಂದ್ರ ಮೋದಿ ಇರುವವರೆಗೆ ಭಾರತ ಯಾರಿಗೂ ಅವಶ್ಯಕತೆ ಇಲ್ಲ. ಆದರೆ ಈಗಿರುವ ವಿರೋಧ ಪಕ್ಷದ ಬಗ್ಗೆ ಚಿಂತೆ ಇದೆ. ಅವರು ರಚನಾತ್ಮಕ ಸಕಾರಾತ್ಮಕ ರಾಜಕಾರಣ ಮಾಡುತ್ತಿಲ್ಲ. ದುಸ್ಸಂಶಯ ಚಿಂತನೆ ಕೃತಿಯಿಂದ ಕೂಡಿದ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಈ ದೇಶಕ ಆಂತರಿಕ ಸುರಕ್ಷತೆಗೆ ದೊಡ್ಡ ಸವಾಲು ವಿರೋಧ ಪಕ್ಷದಿಂದ ಎದುರಾಗಿದೆ ಎಂಬ ಆತಂಕವನ್ನು ಕೆಲವು ಕೈಗಾರಿಕೋದ್ಯಮಿಗಳು ನನ್ನ ಮುಂದೆ ತೋಡಿಕೊಂಡಿದ್ದರು’ ಎಂದು ಹೇಳಿದರು. ‘ನರೇಂದ್ರ ಮೋದಿ ಈ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ವಾಜಪೇಯಿ ನರೇಂದ್ರ ಮೋದಿ  ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೆಳೆದಿದೆ. ಇಂದಿರಾ ಗಾಂಧಿ ಇವತ್ತು ಇದ್ದಿದ್ದರೆ ತುರ್ತು ಪರಿಸ್ಥಿತಿ ಘೋಷಣೆಯಂತಹ ದುಸ್ಸಾಹಸ ಮಾಡುತ್ತಿರಲಿಲ್ಲ. ಪ್ರಜೆಗಳು ಎಲ್ಲ ವಿಷಯ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಶಕ್ತಿ ದೊಡ್ಡದಿದೆ. ವಿರೋಧ ಪಕ್ಷಗಳ ಆಟ ನಡೆಯುವುದಿಲ್ಲ’ ಎಂದು ಅವರನ್ನು ಸಮಾಧಾನಪಡಿಸಿದ್ದೆ ಎಂದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.