ಗದಗ: ‘ಇಂದಿನ ಸಮಾಜದಲ್ಲಿ ವ್ಯಕ್ತಿ ಕಲ್ಯಾಣ ಹಾಗೂ ಲೋಕಕಲ್ಯಾಣ ಆಗಬೇಕಾದರೆ ಶರಣರು ಬೋಧಿಸಿದ ತತ್ವ ಸಿದ್ಧಾಂತಗಳಾದ ಕಾಯಕ, ದಾಸೋಹವನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು’ ಎಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.
ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದಲ್ಲಿ ಬೂದಿಶಿವಯೋಗಿಗಳ ನಿರ್ವಿಕಲ್ಪ ಸಮಾಧಿಯ ಕರ್ತೃ ಗದ್ದುಗೆಗೆ ಬೆಳ್ಳಿ ಕವಚ ಧಾರಣೆ ಮಾಡಿ ಆಶೀರ್ವಚನ ನೀಡಿದರು.
‘ಶರಣರ ತತ್ವಗಳನ್ನು ಕೇಳಿಸಿಕೊಂಡರಷ್ಟೇ ಸಾಲದು. ಅವುಗಳನ್ನು ಬದುಕಿನಲ್ಲಿ ನಮ್ಮ ನಡೆ, ನುಡಿಯಲ್ಲಿ ಅಳವಡಿಸಿಕೊಳ್ಳಬೇಕು. ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಸಮರ್ಪಣೆ ಮಾಡುವುದರಿಂದ ಸಮಾಜ ಕಲ್ಯಾಣವಾಗುತ್ತದೆ. ಸುಂದರ ಸಮಾಜ ನಿರ್ಮಾಣಕ್ಕೆ ಶರಣರು ಬೋಧಿಸಿದ ಸತ್ಯ, ಶುದ್ಧ ಕಾಯಕ ಹಾಗೂ ದಾಸೋಹಗಳು ಪ್ರೇರಣೆಯಾಗುತ್ತವೆ’ ಎಂದರು.
ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೂದೀಶ್ವರರ ತಪೋಭೂಮಿಯಾದ ಸಿದ್ಧರಮಟ್ಟಿಯಿಂದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಜನಾ ಮಂಡಳಿಗಳು, ಸುಮಂಗಲೆಯರ ಕುಂಭಮೇಳದೊಂದಿಗೆ, ಬೆಳ್ಳಿ ಕವಚವನ್ನು ಮಠಕ್ಕೆ ತರಲಾಯಿತು. ಅಭಿಷೇಕ, ಮಹಾಪೂಜೆಯೊಂದಿಗೆ ಗದ್ದುಗೆಗೆ ಬೆಳ್ಳಿಕವಚವನ್ನು ಜೋಡಿಸಲಾಯಿತು.
ಕಾರ್ಯಕ್ರಮದಲ್ಲಿ ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಮಹಾದಾನಿಗಳಿಗೆ ಗುರುರಕ್ಷಣೆಯ ಸನ್ಮಾನ ನೆರವೇರಿಸಲಾಯಿತು. ಬೂದೀಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.