ರೋಣ: ಬಿರುಬೇಸಿಗೆಯ ಇಂದಿನ ದಿನಗಳಲ್ಲಿ ಅಲ್ಪ ನೆರಳಿಗೂ ಮರಗಳನ್ನು ಆಶ್ರಯಿಸುವ ಪರಿಸ್ಥಿತಿ ರೋಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಪಟ್ಟಣ ಹಾಗೂ ನಗರಗಳಿಗೆ ಪ್ರತಿನಿತ್ಯ ಸಂಚರಿಸುವ ಹಳ್ಳಿ ಜನರು ಬಸ್‌ಗಾಗಿ ಕಾಯಲು ಸೂಕ್ತ ಬಸ್ ನಿಲ್ದಾಣ ಇಲ್ಲದೇ ಪರದಾಡುತ್ತಿದ್ದಾರೆ.
ಮೈಸೂರು ರಾಜ್ಯದ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರವಾದ ರೋಣದಲ್ಲಿ ಆಗ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಮಾತ್ರವಲ್ಲದೆ ಬಸ್ ಘಟಕವನ್ನು ಕೂಡ ಪಡೆದಿತ್ತು. ಆದರೆ ಗ್ರಾಮೀಣ ಪ್ರದೇಶಗಳಿಂದ ಕೂಡಿರುವ ರೋಣ ತಾಲ್ಲೂಕಿನಾದ್ಯಂತ ಇರುವ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸಮರ್ಪಕವಾದ ಬಸ್ ನಿಲ್ದಾಣಗಳಿಲ್ಲ. ಇದರಿಂದಾಗಿ ಸಾರ್ವಜನಿಕರು ಮಳೆ, ಬಿಸಿಲು, ಚಳಿಗಾಲದಲ್ಲೂ ತೊಂದರೆ ಅನುಭವಿಸುವಂತಾಗಿದೆ.
ತಾಲ್ಲೂಕಿನ ಸವಡಿ, ಚಿಕ್ಕಮಣ್ಣೂರು, ಸಂದಿಗವಾಡ, ಹಿರೇಮಣ್ಣೂರು, ಸೋಮನಕಟ್ಟಿ, ಹಡಗಲಿ, ಮುದೇನಗುಡಿ, ಬೆನಹಾಳ, ಹುನಗುಂಡಿ, ಕುರಹಟ್ಟಿ, ಮಾಡಲಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳು ಶಿಥಿಲಾವಸ್ಥೆ ತಲುಪಿವೆ.
ಹಲವು ಕಡೆ ಬಸ್ ನಿಲ್ದಾಣದ ತಾರಸಿಗಳು ಬಿದ್ದು ಹೋಗಿದ್ದು, ಮತ್ತೆ ಕೆಲವೆಡೆ ಕುಳಿತುಕೊಳ್ಳುವ ಆಸನಗಳೇ ಕಿತ್ತು ಹೋಗಿವೆ. ಕೆಲವು ಗ್ರಾಮಗಳ ಬಸ್ ನಿಲ್ದಾಣಗಳು ತಿಪ್ಪೆ ಗುಂಡಿಗಳಿಂದ ಆವೃತ್ತವಾಗಿದ್ದರೆ; ಮತ್ತೆ ಕೆಲವು ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ. ಆದರೂ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನದಿಂದ ಪ್ರಯಾಣಿಕರು ಹೈರಾಣಾಗುತ್ತಿದ್ದು, ಪ್ರಯಾಣಿಕರು ಸಮೀಪದ ಮರಗಳ ನೆರಳು ಅಥವಾ ಅಂಗಡಿಗಳ ನೆರಳಿನಲ್ಲಿ ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾದ ಹೊಳೆಆಲೂರು ಬಸ್ ನಿಲ್ದಾಣದಲ್ಲಿ ಕುಡಿಯಲು ಪ್ರಯಾಣಿಕರಿಗೆ ನೀರಿಲ್ಲ ಮತ್ತು ಶೌಚಾಲಯಗಳು ಕೂಡ ಇಲ್ಲದಿರುವುದು ದುರಂತದ ಸಂಗತಿ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.
ತಾಲ್ಲೂಕಿನ ಮತ್ತೊಂದು ದೊಡ್ಡ ಗ್ರಾಮವಾದ ಹಿರೇಹಾಳದಲ್ಲಿ ಕೂಡ ಇದೇ ಸಮಸ್ಯೆ ಮುಂದುವರಿದಿದ್ದು, ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲಸೌಕರ್ಯಗಳನ್ನು ಸಹ ನಿಲ್ದಾಣ ಹೊಂದಿಲ್ಲ. ಸಾರಿಗೆ ಇಲಾಖೆಯವರು ಈ ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದೆ. ಬಿಸಿಲು ರಣ ರಣ ಎನ್ನುತ್ತಿದೆ. ಊರಿಂದ ಊರಿಗೆ ಹೋಗಲು ಬಡವರು, ಮಧ್ಯಮ ವರ್ಗದ ಜನರು ಈಗಲೂ ಸರ್ಕಾರಿ ಬಸ್ ಸೇವೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಬಸ್‌ಗಳನ್ನು ಕಾಯಲು ಉರಿ ಬಿಸಿಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಇದು ಬೇಸಿಗೆ ಒಂದಕ್ಕೆ ಮಾತ್ರ ಸೀಮಿತವಾದ ಸಮಸ್ಯೆ ಅಲ್ಲ. ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವುದು, ಚಳಿಗಾಲದಲ್ಲಿ ನಡುವುದು, ಬೇಸಿಗೆಯಲ್ಲಿ ಬಿಸಿಲಿನಲ್ಲಿ ಬೇಯುವುದು ತಪ್ಪದ ಕರ್ಮವಾಗಿದೆ ಎಂದು ಜನರು ಕಿಡಿಕಾರಿದ್ದಾರೆ.
ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಗ್ರಾಮೀಣ ಭಾಗದ ಪ್ರಯಾಣಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಎಲ್ಲ ಬಸ್ ನಿಲುಗಡೆ ಕೇಂದ್ರದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿರುವ ಬಸ್ ನಿಲ್ದಾಣದ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ
‘ರೋಣ, ಹೊಳೆಆಲೂರು, ಇಟಗಿ ಮತ್ತು ನರೇಗಲ್ ಪಟ್ಟಣದಲ್ಲಿರುವ ಬಸ್ ನಿಲ್ದಾಣಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲಿಯೇ ಸಾರ್ವಜನಿಕರಿಗೆ ಆ ಬಗ್ಗೆ ಮಾಹಿತಿ ನೀಡಲಾಗುವುದು. ಬಸ್ ನಿಲ್ದಾಣಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಾರ್ವಜನಿಕರ ಮೂಲಕವೇ ಸಂಸ್ಥೆಯ ಗಮನ ಸೆಳೆಯುವ ವ್ಯವಸ್ಥೆ ಇದಾಗಿದೆ’ ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜು ತಿಳಿಸಿದ್ದಾರೆ.
ಬಿಸಿಲಿನಲ್ಲಿ ಬಸ್ ಕಾಯುವ ಸ್ಥಿತಿ
ನಮ್ಮ ಊರಿನ ಬಸ್ ನಿಲ್ದಾಣ ಅತ್ಯಂತ ಹಳೆಯದಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ. ಆ ಭಯದಿಂದಲೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಬಿಸಿಲಿನಲ್ಲಿ ನಿಂತು ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
- ಸದ್ದಾಮ್ ಹುಸೇನ್, ಸವಡಿ ಗ್ರಾಮಸ್ಥ
ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಿ
ಸರ್ಕಾರ ಉಚಿತ ಪ್ರಯಾಣ ನೀಡುವ ಬದಲು ಉತ್ತಮ ಬಸ್ ನಿಲ್ದಾಣ ಹಾಗೂ ಮಹಿಳೆಯರಿಗೆ ಸೂಕ್ತ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಒದಗಿಸಿಕೊಡಬೇಕು. ಕಾಟಾಚಾರಕ್ಕೆ ಬಸ್ ನಿಲ್ದಾಣ ನಿರ್ಮಿಸುವ ಬದಲು ಮಹಿಳಾ ವಿಶ್ರಾಂತಿ ಕೊಠಡಿ, ಶೌಚಾಲಯ, ಹಾಲುಣಿಸುವ ಕೊಠಡಿಗಳನ್ನು ನಿರ್ಮಿಸಲು ಕ್ರಮವಹಿಸಬೇಕು.
- ಶಂಕ್ರಪ್ಪ ಸಿರಗುಂಪಿ, ಹಿರೇಹಾಳ ಗ್ರಾಮಸ್ಥ
ತೀವ್ರ ಹದಗೆಟ್ಟಿರುವ ಬಸ್ ನಿಲ್ದಾಣ
ಸುಡುವ ಬಿಸಿಲಿನಲ್ಲಿ ಒಂದು ತಾಸಿಗಿಂತಲೂ ಹೆಚ್ಚಿನ ಸಮಯ ಬಸ್‌ಗಾಗಿ ಕಾಯಬೇಕು. ಒಮ್ಮೊಮ್ಮೆ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಬಸ್ ಬರುವವರೆಗೂ ಬಿಸಿಲಿನಲ್ಲಿಯೇ ಕಾಯಬೇಕು. ಇಲ್ಲಿರುವ ನಿಲ್ದಾಣ ಕುಳಿತುಕೊಳ್ಳಲು ಸಾಧ್ಯವಾಗದಷ್ಟರ ಮಟ್ಟಿಗೆ ಹದಗೆಟ್ಟಿದೆ
- ಮಂಜುಳಾ ನಾಯ್ಕರ, ಅರಹುಣಸಿ ಗ್ರಾಮದ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.