ADVERTISEMENT

ಗದಗ | ವಾಣಿಜ್ಯೋದ್ಯಮಿಗಳ ಸಮ್ಮೇಳನ ಆಯೋಜನೆ: ತಾತನಗೌಡ

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 3:08 IST
Last Updated 13 ಆಗಸ್ಟ್ 2025, 3:08 IST

ಗದಗ: ‘ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಆರಂಭವಾಗಿ 50 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆ.15 ಮತ್ತು 16ರಂದು ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಎರಡು ದಿನಗಳ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ತಾತನಗೌಡ ಪಾಟೀಲ ತಿಳಿಸಿದರು.

‘ಆ.15ರಂದು ಸುವರ್ಣ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ವಿಜಯ ಸಂಕೇಶ್ವರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶರಣಬಸಪ್ಪ ದರ್ಶಾನಾಪುರ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಭಾಗವಹಿಸುವರು’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದ ಪಾರಿತೋಷಕ ವಿತರಣೆ ಕಾರ್ಯಕ್ರಮ ಆ.16ರಂದು ನಡೆಯಲಿದೆ. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಕಳಕಪ್ಪ ಬಂಡಿ ಭಾಗವಹಿಸುವರು. ಇದೇವೇಳೆ, ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಸನ್ಮಾನ ನಡೆಯಲಿದೆ. ಗೌರವ ಸನ್ಮಾನ ಶರಣಬಸಪ್ಪ ಗುಡಿಮನಿಗೆ, ವಿಜೇತ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಣೆ ಮಾಡಲಾಗುವುದು. ಸಂಸ್ಥೆಯ ಅಧ್ಯಕ್ಷ ತಾತನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು’ ಎಂದರು.

ADVERTISEMENT

ಉತ್ಸವ ಸಮಿತಿ ಅಧ್ಯಕ್ಷ ಆನಂದ ಪೋತ್ನಿಸ್ ಮಾತನಾಡಿ, ‘ಆ. 17ರಂದು ಗದಗ ಉತ್ಸವದಲ್ಲಿ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಎಂ.ಬಿ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ. ಪಾಟೀಲ, ಡಾ.ಚಂದ್ರು ಲಮಾಣಿ ಭಾಗವಹಿಸುವರು. ಇದೇವೇಳೆ, ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪಾರ್ವತಿ ಶಾಬಾದಿಮಠ, ಪೂರ್ಣಿಮಾ ಕೃಷ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎಂದು ತಿಳಿಸಿದರು. 

‘ಮಹಿಳೆಯರಿಗಾಗಿ ನಡೆದ ವಿವಿಧ ಕ್ರೀಡಾಕೂಟ ಹಾಗೂ ಅಡುಗೆ ಸ್ಪರ್ಧೆ ವಿಜೇತರಿಗೆ ಆ. 18ರಂದು ಪಾರಿತೋಷಕ ವಿತರಣೆ ಹಾಗೂ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಂದ ಆಹಾರ ಮೇಳ ನಡೆಯಲಿದೆ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಡಾ. ವೇದಾರಾಣಿ ದಾಸನೂರ, ಅನ್ನಪೂರ್ಣ ಸಂಗೋಳಗಿ ಭಾಗವಹಿಸುವರು’ ಎಂದು ತಿಳಿಸಿದರು.

‘ಆ. 19ರಂದು ಬೆಳಿಗ್ಗೆ 11ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ‘ಸರಕು ಮತ್ತು ಸೇವಾ ತೆರಿಗೆಯ ಇತ್ತೀಚಿನ ಬೆಳವಣಿಗೆ’ ವಿಷಯ ಕುರಿತು ಸುಕನ್ಯಾ ನಾಯಕ, ‘ರಫ್ತು ಉತ್ತೇಜನ ಹಾಗೂ 2025–2030ರ ಕೈಗಾರಿಕಾ ನೀತಿ’ ವಿಷಯ ಕುರಿತು ಟಿ.ಎಸ್.ಮಲ್ಲಿಕಾರ್ಜುನ ಉಪನ್ಯಾಸ ನೀಡುವರು. ಸಂಜೆ 6ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌, ಜಿಲ್ಲಾ ಪಂಚಾಯಿತಿ ಸಿಇಒ ಭರತ್‌ ಎಸ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್ ಭಾಗವಹಿಸುವರು’ ಎಂದು ತಿಳಿಸಿದರು.

ನಂದಾ ಬಾಳಿಹಳ್ಳಿಮಠ, ದೀಪಾ ಗದಗ, ಸುಷ್ಮಾ ಜಾಲಿ, ಸುಜಾತ ಗುಡಿಮನಿ, ಜ್ಯೋತಿ ದಾನಪ್ಪಗೌಡ್ರ, ಲಲಿತಾ ತಡಸದ, ಶರಣಬಸಪ್ಪ ಗುಡಿಮನಿ, ವಿಜಯಕುಮಾರ ಮಾಟಲದಿನ್ನಿ, ಶಿವಯ್ಯ ನಾಲತ್ವಾಡಮಠ, ಅಶೋಕಗೌಡ ಪಾಟೀಲ, ರಾಘವೇಂದ್ರ ಕಾಲವಾಡ, ಸೋಮನಾಥ ಜಾಲಿ, ಸಂಜಯ ಬಾಗಮಾರ, ಸುಧಾ ಹುಣಸಿಕಟ್ಟಿ, ಪೂರ್ಣಿಮಾ ಆಟದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.