ADVERTISEMENT

‘ಹಳ್ಳಿಯ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು’

ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 3:50 IST
Last Updated 23 ನವೆಂಬರ್ 2020, 3:50 IST
ಸಚಿವ ಸಿ.ಸಿ.ಪಾಟೀಲ ಅವರು ಲಿಂಗದಾಳ ಗ್ರಾಮದಲ್ಲಿ ಭಾನುವಾರ ನೀರು ಪೂರೈಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಸಚಿವ ಸಿ.ಸಿ.ಪಾಟೀಲ ಅವರು ಲಿಂಗದಾಳ ಗ್ರಾಮದಲ್ಲಿ ಭಾನುವಾರ ನೀರು ಪೂರೈಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.   

ಗದಗ: ‘ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಲಿಂಗದಾಳ ಗ್ರಾಮದಲ್ಲಿ ಭಾನುವಾರ ನೀರು ಪೂರೈಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ನರಗುಂದ ವಿಧಾನಸಭಾ ಮತಕ್ಷೇತ್ರದ 21 ಗ್ರಾಮಗಳ 3,800 ಮನೆಗಳಿಗೆ ಅಂದಾಜು ₹ 20 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ ನಳದ ಮೂಲಕ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಲಿಂಗದಾಳ ಗ್ರಾಮದ 705 ಮನೆಗಳಿಗೆ ಮೂರು ತಿಂಗಳ ಒಳಗಾಗಿ ಪ್ರತಿ ಮನೆಗೆ ಪೈಪ್‌ಲೈನ್, ಟ್ಯಾಪ್ ಹಾಗೂ ಮೀಟರ್ ಅಳವಡಿಸಿ ನೀರನ್ನು ಒದಗಿಸಲಾಗುವುದು. ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶ’ ಎಂದು ಹೇಳಿದರು.

ADVERTISEMENT

ಎಚ್.ಎಸ್.ವೆಂಕಟಾಪೂರ ಗ್ರಾಮದಲ್ಲಿ ಅಂದಾಜು ₹ 3 ಕೋಟಿ ವೆಚ್ಚದ ಎಚ್.ಎಸ್.ವೆಂಕಟಾಪೂರ ಮತ್ತು ಮದಗಾನೂರ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ, ಲಕ್ಕುಂಡಿಯಲ್ಲಿ ಕೋಟುಮಚಗಿ- ಚುರ್ಚಿಹಾಳ ರಸ್ತೆ ಸುಧಾರಣೆ ₹ 1 ಕೋಟಿ ವೆಚ್ಚದ ಕಾಮಗಾರಿ ಹಾಗೂ ಲಕ್ಕುಂಡಿಯಿಂದ ಕಣಗಿನಹಾಳ ರಸ್ತೆ ಸುಧಾರಣೆ ₹ 4 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಲಕ್ಕುಂಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ಹುಣಶಿಕಟ್ಟಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಈರಮ್ಮ ಜಾನುಪಂತರ, ವಸಂತ ಮೇಟಿ, ನಿಂಗಪ್ಪ ದುಂದೂರ, ಪ್ರದೀಪಕುಮಾರ ನವಲಗುಂದ, ಮಹೇಶ ಮುಸ್ಕಿನಬಾವಿ, ಪ್ರೇಮಾ ಮಟ್ಟಿ ಸೇರಿದಂತೆ ಗ್ರಾಮಗಳ ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.