ADVERTISEMENT

ಗದಗ: ಭೀಕರ ರಸ್ತೆ ಅಪಘಾತಕ್ಕೆ ಆರು ಮಂದಿ ಸಾವು

ವರ್ಷದ ಕೊನೆಯಲ್ಲಿ ನಡೆದ ದುರ್ಘಟನೆ; ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಅಪ್ಪಳಿಸಿದ ಕಾರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:45 IST
Last Updated 30 ಡಿಸೆಂಬರ್ 2018, 19:45 IST
ಅಪಘಾತದಲ್ಲಿ ಸಂಪೂರ್ಣ ಅಪ್ಪಚ್ಚಿಯಾದ ಐ10 ಕಾರು
ಅಪಘಾತದಲ್ಲಿ ಸಂಪೂರ್ಣ ಅಪ್ಪಚ್ಚಿಯಾದ ಐ10 ಕಾರು   

ಗದಗ: ನಗರದ ಹೊರವಲಯದ ಮುಂಡರಗಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 63)ಭಾನುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗದುಗಿನಿಂದ ಅಡವಿಸೋಮಾಪುರದ ಕಡೆಗೆ ಹೊರಟಿದ್ದ ಹುಂಡೈ ಐ10 ಕಾರಿನ ಮೇಲೆ, ಲಕ್ಕುಂಡಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಐ20 ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನೇರವಾಗಿ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ.

ಅಪಘಾತಕ್ಕೆ ಕಾರಣವಾದ ಐ20 ಕಾರಿನಲ್ಲಿದ್ದ ಐವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆದರೆ, ಐ10 ಕಾರಿನಲ್ಲಿದ್ದ ಆರು ಮಂದಿಯೂ ಮೃತಪಟ್ಟಿದ್ದಾರೆ.ಮೃತರನ್ನು ಧಾರವಾಡದ ಹೆಬ್ಬಳ್ಳಿ ಅಗಸಿ ಹಾಗೂ ಎಂ.ಆರ್. ನಗರದ ನಿವಾಸಿಗಳಾದ ಸಿದ್ಧಲಿಂಗೇಶ ಕೋರಿಶೆಟ್ಟರ(30), ಮನೋಜ್‌ಕುಮಾರ ಕರಡಿಗುಡ್ಡ(28), ಆನಂದ ಬೆಟಗೇರಿ(28), ಅರುಣಕುಮಾರ ಬೆಟಗೇರಿ(28), ಅಮೃತ ಲಾತೂರಕರ್(26), ಚನ್ನು ಬಾಡದ(28) ಎಂದು ಗುರುತಿಸಲಾಗಿದೆ.

ತೀವ್ರವಾಗಿ ಗಾಯಗೊಂಡ ಗದಗ ನಿವಾಸಿಗಳಾದ ಮಂಜುನಾಥ ಹಳ್ಳಿಕೇರಿ, ವಿಶ್ವನಾಥ ಕೆರೂರ ಅವರನ್ನು ಹುಬ್ಬಳ್ಳಿ ‘ಕಿಮ್ಸ್‌’ಗೆ ದಾಖಲಿಸಲಾಗಿದೆ.ವಿರುಪಾಕ್ಷಪ್ಪ ಅಬ್ಬಿಗೇರಿ, ವಿಜಯಕುಮಾರ ಬನವಾಸಿ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಅವರು ಗದುಗಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದುವೆಗೆ ಬಂದವರು ಮಸಣ ಸೇರಿದರು
ಮೃತಪಟ್ಟ ಆರೂ ಮಂದಿಯೂ ಗದುಗಿನ ನರಸಾಪುರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಧಾರವಾಡದಲ್ಲಿ ನೆಲಸಿದ್ದ ಇವರು, ಗದುಗಿನಲ್ಲಿ ಭಾನುವಾರ ನಡೆಯಲಿದ್ದ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಶನಿವಾರ ರಾತ್ರಿಯೇ ನಗರಕ್ಕೆ ಬಂದಿದ್ದರು. ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾರು ತೆಗೆದುಕೊಂಡು ಮುಂಡರಗಿ ರಸ್ತೆ ಮೂಲಕ ಅಡವಿಸೋಮಾಪುರದ ಕಡೆಗೆ ಹೊರಟಿದ್ದರು. ಈ ಚತುಷ್ಪಥ ಹೆದ್ದಾರಿಯಲ್ಲಿ ಇನ್ನೊಂದು ಬದಿಯಿಂದ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು, ಇವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪ್ಪಳಿಸಿದೆ.ಅಪಘಾತದ ತೀವ್ರತೆಗೆ ಐ10 ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಅಪಘಾತದ ವೇಳೆ ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡರೂ, ಒಳಗಿದ್ದವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹಗಳು ಕಾರಿನೊಳಗೆ ಸಿಲುಕಿಕೊಂಡಿದ್ದರಿಂದ ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟರು. ಕಾರಿನ ಅವಶೇಷಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸತತ 4 ಗಂಟೆ ಕಾರ್ಯಾಚರಣೆ ನಡೆಸಿ,ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಘಟನೆ ನಡೆದ ಬನ್ನಿಕಟ್ಟಿ ತಿರುವು ಅಪಘಾತ ವಲಯ ಎಂದೇ ಹೆಸರಾಗಿದೆ.ಈ ಸ್ಥಳದಲ್ಲಿ ಹಿಂದೆಯೂ ರಸ್ತೆ ಅಪಘಾತಗಳು ನಡೆದು ಸಾವು ಸಂಭವಿಸಿವೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.