ADVERTISEMENT

ಜಾತಿ ಗಣತಿ | ಲಿಂಗಾಯತ ಕುಡು ಒಕ್ಕಲಿಗ ಅಂತ ಬರೆಯಿಸಿ; ಶಿವಕುಮಾರ್ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:44 IST
Last Updated 15 ಸೆಪ್ಟೆಂಬರ್ 2025, 4:44 IST
ಗದಗ ನಗರದ ಕುಡು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ್ ಪಾಟೀಲ ಮಾತನಾಡಿದರು
ಗದಗ ನಗರದ ಕುಡು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ್ ಪಾಟೀಲ ಮಾತನಾಡಿದರು   

ಗದಗ: ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ  ಸಮೀಕ್ಷೆದಾರರು ಮನೆಗೆ ಬಂದಾಗ ಕುಡು ಒಕ್ಕಲಿಗ ಸಮಾಜದವರು ಧರ್ಮದ ಕಾಲಂದಲ್ಲಿ ಲಿಂಗಾಯತ, ಉಪಜಾತಿ ಕಾಲಂನಲ್ಲಿ  ಲಿಂಗಾಯತ ಕುಡು ಒಕ್ಕಲಿಗ ಎಂದು ಬರೆಯಿಸಬೇಕು’ ಎಂದು ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ್ ಪಾಟೀಲ ಹೇಳಿದರು.

ನಗರದ ಕುಡು ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಾತಿ ಸಮೀಕ್ಷೆ ವಿಷಯದಲ್ಲಿ ಸಮಾಜದವರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ಬರೆಯಿಸಿದ್ದನ್ನು ಕೇಳಿ ಖಾತ್ರಿ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಅಖಿಲ ಭಾರತ ಲಿಂಗಾಯತ ಕುಡು ಒಕ್ಕಲಿಗರ ಮಹಾಸಭೆಯ ಅಧ್ಯಕ್ಷ ಬಿ.ಬಿ.ಪಾಟೀಲ, ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿ, ಸಮಾಜದ ಜನರು ಸಮೀಕ್ಷೆ ಮಾಡಲು ಬಂದವರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.

ರಾಜ್ಯದ 12 ಜಿಲ್ಲೆಗಳಿಂದ ಬಂದಿದ್ದ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಎಲ್ಲ ಜಿಲ್ಲೆಗಳ ಪ್ರತಿನಿಧಿಗಳ ಅಭಿಪ್ರಾಯ ಕ್ರೋಡೀಕರಿಸಿ ಅಂತಿಮವಾಗಿ ಧರ್ಮದ ಕಾಲಂನಲ್ಲಿ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಲಿಂಗಾಯತ ಕುಡು ಒಕ್ಕಲಿಗ ಎಂದು ಬರೆಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಧಾರವಾಡ ಜಿಲ್ಲೆಯ ನಿಂಗಣ್ಣ ಹಳ್ಳದ, ರವಿ ಕುಡುಒಕ್ಕಲಿಗಾರ, ಬೆಂಗಳೂರಿನ ಅನಿಲ್ ಪಾಟೀಲ, ಯೋಗಪ್ಪ ದೇವೂರ, ಬಳ್ಳಾರಿ ಜಿಲ್ಲೆಯ ದೊಡ್ಡದಾಸಪ್ಪ ಹಾಗೂ ಮಲ್ಲಿಕಾರ್ಜುನ ಬಿಜಾಪುರ ಜಿಲ್ಲೆಯ ಸುರೇಶಗೌಡ ಪಾಟೀಲ, ಎಸ್.ಎ.ಬಿರಾದಾರ, ಶಿವನಗೌಡ ಪಾಟೀಲ, ಬಾಳಪ್ಪ ಸೋಮಗೊಂಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಪೂರ್ಣಗೊಂಡಿರುವ ಗದುಗಿನ ಕುಡು ಒಕ್ಕಲಿಗರ ಭವನ ಪೂರ್ಣಗೊಳಿಸುವ ವಿಷಯವಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ಎಸ್.ಎಸ್.ಸೋಮಗೊಂಡ ಪ್ರಾರ್ಥಿಸಿದರು. ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.