
ಗದಗ: ‘ಬೆಂಗಳೂರಿನ ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಮಧ್ಯೆ ಪ್ರವೇಶ ಮಾಡಿರುವುದು ಖಂಡನೀಯ’ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಟೀಕಿಸಿದರು.
‘ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಜಾಗ ವಶಕ್ಕೆ ಪಡೆಯುವ ಮೂಲಕ ಸರ್ಕಾರ ಒಳ್ಳೆ ಹೆಜ್ಜೆ ಇಟ್ಟಿದೆ. ಆದರೆ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್ ಸರ್ಕಾರ ಎಂದು ಟೀಕಿಸಿರುವುದು ಸರಿಯಲ್ಲ. ದೇಶದ್ರೋಹಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಪ್ರದೇಶದ ಕ್ರಮಕ್ಕೂ, ಇಲ್ಲಿನ ಅತಿಕ್ರಮಣ ತೆರವಿಗೂ ಹೋಲಿಕೆ ಮಾಡುವುದು ಎಷ್ಟು ಸರಿ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಕೆ.ಸಿ ವೇಣುಗೋಪಾಲ ಅವರು ಹೇಳಿದ ಕೂಡಲೇ ಸುಮಾರು ನಾಲ್ಕು ನೂರು ಜನರಿಗೆ ಮನೆ ನೀಡಲಾಗಿದೆ. ರಾಜ್ಯದಲ್ಲಿ ಇನ್ನುಳಿದವರಿಗೆ ಯಾಕೆ ಮನೆ ಹಂಚಿಕೆ ಮಾಡಿಲ್ಲ. ಕೇವಲ 400 ಜನರ ಓಲೈಕೆಗಾಗಿ ರಾಜ್ಯದ 7 ಕೋಟಿ ಜನರ ಹಿತಾಸಕ್ತಿ ಬಲಿ ಕೊಡಲಾಗುತ್ತಿದೆ’ ಎಂದು ಹೇಳಿದರು.
‘ನಮ್ಮ ರಾಜ್ಯದಲ್ಲಿ ಕೇರಳದ ಮಾವುತ ಮೃತಪಟ್ಟರೆ ₹15 ಲಕ್ಷ ಪರಿಹಾರ ಕೊಡಲಾಗಿದೆ. ನಮ್ಮಲ್ಲಿ ಯಾರಾದರೂ ಮೃತಪಟ್ಟರೆ ₹5 ಲಕ್ಷ ಮಾತ್ರ ನೀಡಲಾಗಿದೆ. ರಾಜ್ಯದ ಆಡಳಿತದಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಹಸ್ತಕ್ಷೇಪ ಹೆಚ್ಚಾಗಿದೆ. ಅವರು ಕರ್ನಾಟಕದ ಸೂಪರ್ ಸಿಎಂ ಆಗಿದ್ದಾರೆ. ಈ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳಲು ತಂತ್ರ ಪ್ರತಿತಂತ್ರಗಳು ನಡೆದಿವೆ. ಕೇರಳದ ಅಲ್ಪಸಂಖ್ಯಾತರನ್ನು ಓಲೈಸಲು ಹೋಗಿ ದಕ್ಷಿಣದ ರಾಜ್ಯಗಳ ನಡುವೆ ಜಗಳ ತಂದಿಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಕೇರಳದಿಂದ ಬಂದವರು ಯಾರೂ ಗುಡಿಸಲು ಹಾಕಿ ವಾಸ ಮಾಡುತ್ತಿಲ್ಲ. ಹಾಗಾದರೆ ಸಿಎಂ ಪಿಣರಾಯಿ ಅವರಿಗೂ ಇಲ್ಲಿಗೂ ಏನು ಸಂಬಂಧ? ಬೇರೆ ರಾಜ್ಯದವರು ಇಲ್ಲಿಗೆ ಬಂದು ಒತ್ತಡ ಹಾಕುತ್ತಿದ್ದಾರೆ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಹೀನ ಆಗಿದ್ದಾರೆಯೇ? ನೀವು ಯಾರ ಗುಲಾಮರಾದರೂ ಆಗಿ; ರಾಜ್ಯದ ಜನರನ್ನು ಗುಲಾಮರನ್ನಾಗಿ ಮಾಡಬೇಡಿ’ ಎಂದು ಹರಿಹಾಯ್ದರು.
ರಾಜ್ಯದಲ್ಲಿನ ಡ್ರಗ್ ಮಾಫಿಯಾ ಗಾಬರಿ ಹುಟ್ಟಿಸುವಷ್ಟರ ಮಟ್ಟಿಗೆ ವ್ಯಾಪಿಸಿದೆ. ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ಮಾಫಿಯಾ ಪತ್ತೆ ಹಚ್ಚಿದ್ದಾರೆ. ಹಾಗಾದರೆ, ರಾಜ್ಯದ ಪೊಲೀಸರು ಮತ್ತು ಗುಪ್ತಚರ ವಿಭಾಗ ಏನು ಮಾಡುತ್ತಿದೆ ಎಂದು ಸರ್ಕಾರವನ್ನು ಟೀಕಿಸಿದರು.
ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ, ಮುಖಂಡರಾದ ಎಂ.ಎಸ್ .ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷ್ಮೀ ಮಾನ್ವಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ್, ಶಿವರಾಜಗೌಡ ಹಿರೇಮನಿ ಪಾಟೀಲ ಇದ್ದರು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಬೆಳಗಾವಿ ಅಧಿವೇಶನದಿಂದ ಉತ್ತರ ಕರ್ನಾಟಕದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರ ನಯಾ ಪೈಸೆ ಅನುದಾನ ಘೋಷಿಸಲಿಲ್ಲ.ಸಿ.ಸಿ.ಪಾಟೀಲ ಶಾಸಕ
‘ಬೆಳಗಾವಿ ಅಧಿವೇಶನ ವ್ಯರ್ಥ’ ‘ನೂರಾರು ಕೋಟಿ ಖರ್ಚು ಮಾಡಿ ನಡೆಸುವ ಬೆಳಗಾವಿ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಇದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಉಪಯೋಗ ಆಗಿಲ್ಲ’ ಎಂದು ಶಾಸಕ ಸಿ.ಸಿ.ಪಾಟೀಲ ಟೀಕಿಸಿದರು. ‘ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಎಲ್ಲರ ಅಭಿಪ್ರಾಯ ಆಲಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನಾದರೂ ವಿಶೇಷ ಯೋಜನೆ ಪ್ರಕಟಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಗಳನ್ನು ಅವರು ಹುಸಿಗೊಳಿಸಿದ್ದಾರೆ. ಇದೊಂದು ಅಭಿವೃದ್ಧಿ ಶೂನ್ಯ ಹಾಗೂ ದ್ವೇಷದ ರಾಜಕಾರಣ ಮಾಡುವ ತುಘಲಕ್ ಸರ್ಕಾರ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.