ADVERTISEMENT

ಸ್ಮಶಾನ ಜಾಗಕ್ಕೆ ಒತ್ತಾಯಿಸಿ: ತಹಶೀಲ್ದಾರ್ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಿಸಲು ಹರಿಪೂರ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:16 IST
Last Updated 16 ಸೆಪ್ಟೆಂಬರ್ 2019, 14:16 IST
ಶಿರಹಟ್ಟಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ  ಹರಿಪೂರ ಗ್ರಾಮಸ್ಥರು ಶವ ಇಟ್ಟು ಪ್ರತಿಭಟನೆ ನಡೆಸಿದರು
ಶಿರಹಟ್ಟಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ  ಹರಿಪೂರ ಗ್ರಾಮಸ್ಥರು ಶವ ಇಟ್ಟು ಪ್ರತಿಭಟನೆ ನಡೆಸಿದರು   

ಶಿರಹಟ್ಟಿ: ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಿಸಲು ಕ್ರಮ ವಹಿಸದ ಪಟ್ಟಣ ಪಂಚಾಯ್ತಿ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಮೀಪದ ಹರಿಪೂರ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್‌ ಕಚೇರಿ ಎದುರೇ ಶವ ಇಟ್ಟು ಪ್ರತಿಭಟನೆ ನಡೆಸಿದರು.

‘ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಪಡಿಸುವಂತೆ 7 ವರ್ಷಗಳಿಂದ ನಿರಂತರ ಪಟ್ಟಣ ಪಂಚಾಯ್ತಿ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ, ಅಕ್ಕಪಕ್ಕದ ಜಮೀನಿನ ಮಾಲೀಕರ ಕೈ, ಕಾಲು ಹಿಡಿದು, ಅಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದ ದಯನೀಯ ಸ್ಥಿತಿ ಇದೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಎಂ.ಎಂ. ಗಾಣಿಗೇರ ಹೇಳಿದರು.

‘2012ರಲ್ಲೇ ಸ್ಮಶಾನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಆದೇಶವಾಗಿದೆ. ಜಿಲ್ಲಾಧಿಕಾರಿಗಳು ಭೂಮಿಯ ದರವನ್ನು ನಿಗದಿಪಡಿಸಿ ಮಂಜೂರಾತಿ ಆದೇಶ ನೀಡಿದರೂ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೂ ಹಣ ಬಿಡುಗಡೆಯಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ADVERTISEMENT

‘ಗ್ರಾಮದಲ್ಲಿ ಶವವನ್ನು ತಗೆದುಕೊಂಡು ಹೋಗಲು ರಸ್ತೆ ಇಲ್ಲ. ವಿದ್ಯುತ್‌ ಸಂಪರ್ಕ ಇಲ್ಲ. ಮೊಬೈಲ್‌ ಬೆಳಕಿನಿಂದ ಶವ ಸಂಸ್ಕಾರ ಮಾಡುವ ದುರ್ಗತಿ ಬಂದಿದೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಈ ಸ್ಥಿತಿ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಜಾಗವಿಲ್ಲದ ಕಾರಣ, ಪತಿಯ ಮೃತದೇಹವನ್ನು ತಹಶೀಲ್ದಾರ್‌ ಕಚೇರಿ ಆವರಣಕ್ಕೆ ತರಲಾಗಿದೆ. ಸೂಕ್ತ ವ್ಯವಸ್ಥೆ ಮಾಡುವವರೆಗೂ ಶವವನ್ನು ಇಲ್ಲಿಯೇ ಇಟ್ಟು ಪ್ರತಿಭಟನೆ ನಡೆಸುತ್ತೇವೆ’ ಎಂದು ಮೃತ ಪ್ರಭು ಮೊರಬದ (66) ಅವರ ಪತ್ನಿ ಈರವ್ವ ಮೊರಬದ ಹೇಳಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ ಪ್ರತಿಭಟನಾಕಾರರ ಮನವೊಲಿಸಿದರು. ಒಂದು ವಾರದೊಳಗೆ ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ವಾಪಸ್‌ ಪಡೆದ ಗ್ರಾಮಸ್ಥರು, ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದರು.

‘ಸ್ಮಶಾನ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು’ ಎಂದು ತಹಶೀಲ್ದಾರ್‌ ಹೇಳಿದರು. ಪಟ್ಟಣ ಪಂಚಾಯ್ತಿ ಸದಸ್ಯ ಮಹದೇವ ಗಾಣಿಗೇರ, ಅಕ್ಬರ ಯಾದಗಿರಿ, ಮುತ್ತು ಭಾವಿಮನಿ, ಮಹೇಶ ದಾನಪ್ಪಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.